Mysore
26
light rain

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮೈಸೂರು ವಿ.ವಿಯಲ್ಲಿ ಅಂಬೇಡ್ಕರ್‌ ಬ್ಯಾನರ್‌ ಹರಿದಿರುವುದಕ್ಕೆ ಖಂಡನೆ ; ಪ್ರತಿಭಟನೆ

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಯದ ಮಾನಸಗಂಗೋತ್ರಿ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್ ಹರಿದಿರುವುದನ್ನು ಖಂಡಿಸಿ ಮೈಸೂರು ವಿ.ವಿಯ ಸಂಶೋಧಕರ ಸಂಘ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಜಮಾವಣೆಗೊಂಡ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ವಿ.ವಿ ಆವರಣದಲ್ಲಿ ಅಳವಡಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬ್ಯಾನರ್‌ ಅನ್ನು ವಿ.ವಿಯ ಆಡಳಿತ ಅಧಿಕಾರಿಗಳು ಯಾರ ಗಮನಕ್ಕೂ ತಾರದೆ ಏಕಾಏಕಿ ಹರಿದು ತೆರವು ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಸಂಶೋಧಕರ ಸಂಘದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನದ ಅಂಗವಾಗಿ ಶುಭಕೋರಿ ಬ್ಯಾನರ್ ಅಳವಡಿಸಲಾಗಿತ್ತು. ಸಂಶೋಧಕರ ಸಂಘ ಹಾಗೂ ಯಾವುದೇ ವಿದ್ಯಾರ್ಥಿಗಳ ಗಮನಕ್ಕೂ ತಾರದೆ ಏಕಾಏಕಿ ಬ್ಯಾನರ್‌ ಅನ್ನು ತೆರವು ಮಾಡಿದ್ದಾರೆ. ವಿ.ವಿ ಆಡಳಿತ ದಲಿತ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಮನಸ್ಥಿತಿ ತೋರುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿ ಆವರಣದಲ್ಲಿ ಕಳೆದ 40-50 ವರ್ಷಗಳಿಂದ ಬ್ಯಾನರ್ ಅಳವಡಿಸುತ್ತಿದ್ದೇವೆ. ಸಂಶೋಧಕರ ಸಂಘದ ಚುನಾವಣೆಯಲ್ಲಿ ಗೆದ್ದಂತಹ ಅಭ್ಯರ್ಥಿಗಳ ಫೋಟೊ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವುದು ವಾಡಿಕೆ. ಆದರೆ, ಪ್ರಸ್ತುತ ಕುಲಸಚಿವರು ಆಡಳಿತಾಧಿಕಾರಿಗಳ ಮೂಲಕ ಬ್ಯಾನರ್ ಅನ್ನು ತೆಗೆಸಿದ್ದಾರೆ. ಬ್ಯಾನರ್ ಅನ್ನು ಹರಿದು ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಅಂಬೇಡ್ಕರ್ ವಿರೋಧಿ ಮನಸ್ಥಿತಿಗಳನ್ನು ಮಟ್ಟ ಹಾಕಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಒಂದು ವೇಳೆ ವಿಶ್ವವಿದ್ಯಾನಿಲಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಬಳಿಕ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಆಗಮಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ್ ಪ್ರತಿಭಟನಾಕಾರರ ದೂರು ಸ್ವೀಕರಿಸಿ, ಚರ್ಚೆ ನಡೆಸಿದರು. ಬಳಿಕ ಕೋರಿಕೆ ಮೆರೆಗೆ ಸ್ಥಳಕ್ಕೆ ಆಗಮಿಸಿದ ವಿ.ವಿ ಕುಲಪತಿ ಎನ್.ಕೆ.ಲೋಕನಾಥ್ ಸಂಪೂರ್ಣ ಸಮಸ್ಯೆ ಆಲಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

Tags:
error: Content is protected !!