ಮೈಸೂರು: ಪ್ರಖರ ವಾಗ್ಮಿ, ಪ್ರಗತಿಪರ ಚಿಂತಕ ಹಾಗೂ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ ಮಹೇಶ್ ಚಂದ್ರಗುರು(68) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯಿಂದ ಬಳಲುತ್ತಿದ್ದ ಪ್ರೊ.ಮಹೇಶ್ ಚಂದ್ರಗುರು ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗ್ಯಾಂಗ್ರೀನ್ ಕಾರಣದಿಂದ ಕಾಲುನೋವಿನ ಸಮಸ್ಯೆ ಎದುರಿಸುತ್ತಿದ್ದ ಅವರು ಇಂದು(ಆ.17) ಸಂಜೆ 7:30 ರ ಸುಮಾರಿಗೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಹೈದರಬಾದ್‌ನಲ್ಲಿ ಸಾರ್ವಜನಿಕ ಸಂಪರ್ಕಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಪ್ರೊ.ಮಹೇಶ್ ಚಂದ್ರಗುರು ಬಳಿಕ ಮಂಗಳೂರು ವಿ.ವಿಯ ಪತ್ರಿಕೋದ್ಯಮ ಪ್ರಾಧ್ಯಾಪಕರಾದರು. ನಂತರ ಮೈಸೂರು ವಿವಿಗೆ ವರ್ಗಾವಣೆಗೊಂಡು ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಹಲವಾರು ಕಾರ್ಯಗಳನ್ನು ಕೈಗೊಂಡರು. ಜತೆಗೆ ಯಾವಗಲೂ ವಿದ್ಯಾರ್ಥಿ ಸ್ನೇಹಿಯಾಗಿದ್ದ ಅವರು ವಿವಿಯಲ್ಲಿ ವಿದ್ಯಾರ್ಥಿ ಬಳಗವನ್ನೇ ಕಟ್ಟಿದ್ದರು. ಬಳಿಕ 2019ರಲ್ಲಿ ಸೇವೆಯಿಂದ ನಿವೃತ್ತರಾದರು.
ನಿವೃತ್ತಿ ಬಳಿಕ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಮಹೇಶ್ ಚಂದ್ರ ಗುರು ತಮ್ಮ ಹೇಳಿಕೆಗಳ ಮೂಲಕ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದರು. ಜೊತೆಗೆ ಮೈಸೂರು ದಸರಾ ವೇಳೆ ಮಹಿಷಾ ದಸರಾ ಆಚರಣೆಗೊಳ್ಳಲು ಇವರ ಪಾತ್ರ ಪ್ರಮುಖವಾದದ್ದು.





