ಮೈಸೂರು: ರಾಜ್ಯದಲ್ಲಿ ಫೈನಾನ್ಸ್ ಕಂಪೆನಿಗಳು ಪೊಲೀಸರ ರಕ್ಷಣೆ ಪಡೆದೇ ಸಾಲಗಾರರಿಗೆ ತೊಂದರೆ ನೀಡುತ್ತಿವೆ ಎಂಬ ಮಾಹಿತಿ ಇದೆ. ಆದರೆ ನಾನು ಇಲ್ಲಿ ಪೊಲೀಸರ ಮೇಲೆ ಆರೋಪಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.27) ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದಲೇ ಇದೆಲ್ಲವೂ ಆಗುತ್ತಿದ್ದು, ಸಾರ್ವಜನಿಕರಿಗೆ ಕಿರುಕುಳ ನೀಡುವ ಪ್ರಕರಣಗಳು ನಡೆಯುತ್ತಿವೆ. ನೋಂದಾಯಿತ ಮೈಕ್ರೋ ಫೈನಾನ್ಸ್ ಕಂಪೆನಿಗಳು ಮಾತ್ರವೇ ಆರ್‌ಬಿಐ ಮಾರ್ಗಸೂಚಿಗೆ ಒಳಪಡುತ್ತವೆ ಎಂಬುದನ್ನು ರಾಜ್ಯ ಸರ್ಕಾರ ಗಮನಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೀಗಾಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಸಾಲಕ್ಕೆ ಇಂತಿಷ್ಟೇ ಬಡ್ಡಿ ವಿಧಿಸಬೇಕು ಎಂಬುದು ಇದೆ. ಆದರೆ ನೋಂದಾಯಿಸದ ಫೈನಾನ್ಸ್ ಕಂಪೆನಿಗಳು ಸಾಕಷ್ಟಿವೆ. ಅವುಗಳನ್ನು ಸರ್ಕಾರ ನಿಯಂತ್ರಿಸಬೇಕು. ಅಲ್ಲದೇ ಫೈನಾನ್ಸ್‌ಗಳ ವಿರುದ್ಧ ಸಮಿತಿ ರಚಿಸಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.