ಮೈಸೂರು: ಸ್ಥಳ ಮಹಜರು ನಡೆಸುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ದರೋಡೆಕೋರರು ಮೈಸೂರು ತಾಲ್ಲೂಕಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡ ಹಗಲೇ ಕಾರನ್ನು ಅಡ್ಡಗಟ್ಟಿ ಕೇರಳದ ಉದ್ಯಮಿಯೋರ್ವರ ಹಣ ಎಗರಿಸಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು, ಪ್ರಕರಣ ಸಂಬಂಧ ನಾಲ್ಕು ಜನರನ್ನು ಬಂಧಿಸಿ ಜೈಲಿಗಟ್ಟಿದ್ದರು. ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದ ಪೊಲೀಸರು, ಕೇರಳ ಪೊಲೀಸರ ಜೊತೆಗೂಡಿ ಕಾರ್ಯಾಚರಣೆ ನಡೆಸಿದ್ದರು. ಕಳ್ಳರ ಜಾಡು ಹಿಡಿದ ಪೊಲೀಸರಿಗೆ ನಿನ್ನೆ ಮಂಜಾನೆ ಕೇರಳದಲ್ಲಿ ಪ್ರಕರಣದ ಮೂವರು ಆರೋಪಿಗಳು ಸೆರೆ ಸಿಕ್ಕಿದ್ದರು. ಈ ವೇಳೆ ಆರೋಪಿಗಳನ್ನು ಸ್ಥಳ ಮಹಜರು ನಡೆಸುವ ವೇಳೆ ಅರೋಪಿಯೋರ್ವ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಎಸ್ಐ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದನು. ಈ ವೇಳೆ ಆರೋಪಿಯು ಎಸ್ಐ ಕಪಾಳಕ್ಕೆ ಬಾರಿಸಿದ್ದಲ್ಲದೇ ಅಕ್ಕಪಕ್ಕದಲ್ಲಿದ್ದ ಸಿಬ್ಬಂದಿಗಳನ್ನು ತಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಈ ವೇಳೆ ಎಚ್ಚೆತ್ತ ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಯಾವುದೇ ಕಾರಣಕ್ಕೂ ಓಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಲ್ಲೆಗೊಳಗಾದ ಪೊಲೀಸರು ಹಾಗೂ ಆರೋಪಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.