ನಂಜನಗೂಡು: ನಂಜನಗೂಡಿನ ಗೋಳೂರು ಸರ್ಕಲ್ ಬಳಿಯಿರುವ ಆಶೀರ್ವಾದ್ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ನಾವು ಕೊಟ್ಟ ಹಣಕ್ಕೆ ಸರಿಯಾಗಿ ಪೆಟ್ರೋಲ್ ಹಾಕುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಗ್ರಾಹಕರು, ಈ ಬಂಕ್‌ನಿಂದ ನಮಗೆ ತೀವ್ರ ಮೋಸವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಂಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲೇ ರಿಯಾಲಿಟಿ ಚೆಕ್ ಮಾಡಿದ್ದಾರೆ. ಹಾಕಿದ ಪೆಟ್ರೋಲನ್ನೇ ಮರು ಪರಿಶೀಲನೆ ಮಾಡಿದ ಗ್ರಾಹಕರು, 1 ಲೀಟರ್‌ಗೆ ಭಾರೀ ಮೋಸವಾಗಿದೆ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಬಂಕ್ ಮಾಲೀಕ ಬರುವಂತೆ ಆಗ್ರಹಿಸಿದ ಗ್ರಾಹಕರು, ಸ್ಥಳೀಯ ಪೊಲೀಸರ ಗಮನಕ್ಕೂ ತಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಂಜನಗೂಡು ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೋಸ ಮಾಡುತ್ತಿರುವುದು ಸಾಬೀತಾದರೆ ಪೆಟ್ರೋಲ್ ಬಂಕ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.





