ಮೈಸೂರು: ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಅವಕಾಶ ಮಾಡಿಕೊಡದ ಅಮಾನವೀಯ ಘಟನೆಯೊಂದು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ತವರು ಕ್ಷೇತ್ರವಾದ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಭೈರಾಪುರ ಪಟ್ಟಣದಲ್ಲಿ ನಡೆದಿದೆ.
ಮೃತರು ದಾವಣಗೆರೆ ಮೂಲದ ಕೊರಚ ಕುಟುಂಬದ ರತ್ನಮ್ಮ ಎಂಬ ಕಾರಣಕ್ಕೆ ಸ್ಥಳಿಯರು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಇವರು ಹಲವಾರು ವರ್ಷಗಳಿಂದ ತಿ.ನರಸೀಪುರ ತಾಲ್ಲೂಕಿನ ಭೈರಾಪುರ ಪಟ್ಟಣದಲ್ಲಿ ವಾಸವಾಗಿದ್ದು, ವಾಸಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ, ವಾಸಸ್ಥಳ ದೃಢೀಕರಣ ಪತ್ರವಿದೆ.
ಮೃತ ದೇಹವನ್ನು ಕೊರಚ ಕುಟುಂಬವು ಹೂಳಲು ಹೊರಟಾಗ ಸ್ಥಳೀಯರು ಕಿರಿಕ್ ತೆಗೆದಿದ್ದಾರೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಪ್ರತ್ಯೇಕ ಸ್ಮಶಾನವಿದ್ದು, ಯಾವ ಸ್ಮಶಾನದಲ್ಲೂ ಅಂತ್ಯಸಂಸ್ಕಾರ ನೆರವೇರಿಸಲು ಮುಖಂಡರು ಅವಕಾಶ ಮಾಡಿಕೊಡದ ಕಾರಣ ಕುಟುಂಬಸ್ಥರು ಮೃತದೇಹವನ್ನು ದಾವಣಗೆರೆಗೆ ಕೊಂಡೊಯ್ದಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ, ಅಧಿಕಾರಿಗಳು, ರಾಜಕಾರಣಿಗಳು ತೀವ್ರ ಮೌನವಹಿಸಿದ್ದು, ಇವರ ನಡೆಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಶವವನ್ನು ದಾವಣಗೆರೆಗೆ ರವಾನೆ ಮಾಡಿದ್ದಾರೆ.





