ನಂಜನಗೂಡು: ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದ ರೈತರು ನಾಲೆ ನೀರಿಲ್ಲದೇ ಭತ್ತ ಬೆಳೆದಿದ್ದು ಪೂರ್ವ ಮುಂಗಾರು ಮಳೆ ಇವರ ಪಾಲಿಗೆ ವರದಾನವಾಗಿದೆ.
ಯಾವುದೇ ನದಿ ಮೂಲವನ್ನು ಅವಲಂಬಿಸದೇ ಸುಮಾರು 50ಕ್ಕೂ ಹೆಚ್ಚಿನ ಎಕರೆಯಲ್ಲಿ ರೈತರು ಭತ್ತದ ಕೃಷಿ ಮಾಡಿದ್ದಾರೆ. ಈಗ ಭತ್ತವು ತೆನೆ ಬಿಟ್ಟಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮೂಡಿಸಿದೆ.
ಬೊಕ್ಕಹಳ್ಳಿ ಗ್ರಾಮದ ರಾಂಪುರ ನಾಲಾ ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ರೈತರು ನೈಸರ್ಗಿಕವಾಗಿ ಉತ್ತಮ ಭತ್ತದ ಫಸಲು ಕಂಡುಕೊಂಡಿದ್ದಾರೆ. ಭತ್ತಕ್ಕೆ ಹೆಚ್ಚು ಹೆಚ್ಚು ನೀರು ಬೇಕಾಗಿರುವುದರಿಂದ ನಾಲೆಯಿಂದ ನೀರನ್ನು ಪಡೆಯಲಾಗುತ್ತದೆ. ಆದರೂ ಈ ರೈತರು ಮಳೆ ನೀರಿನಿಂದಲೇ ಬೆಳೆ ಬೆಳೆದಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ರೈತರು ಉತ್ತಮ ಮಳೆಯಾದರೆ ನಮಗೆ ಯಾವುದೇ ನದಿ ನೀರು ಬೇಕಿಲ್ಲ. ಉತ್ತಮ ಮಳೆಯಿಂದ 50ಕ್ಕೂ ಹೆಚ್ಚಿನ ಎಕರೆಯಲ್ಲಿ ಭತ್ತ ಬೆಳೆದಿದ್ದೇವೆ. ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆದು ಹೆಚ್ಚು ಹೆಚ್ಚು ಲಾಭ ಪಡೆದುಕೊಳ್ಳಬಹುದು ಎಂದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.