ಮೈಸೂರು : ಇಂದಿನ ಯುವಜನತೆ ಪುಸ್ತಕಗಳಿಗೆ ಸೀಮಿತವಾಗದೆ, ಮಹಾತ್ಮರ ಚಿಂತನೆಗಳಿಂದ ಪ್ರೇರಣೆ ಪಡೆದು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ರಾಷ್ಟ್ರೀಯ ಉಚ್ಛತ್ತರ್ ಶಿಕ್ಷಣ ಅಭಿಯಾನ ಪ್ರಾಯೋಜಕತ್ವದಲ್ಲಿ ಮೈಸೂರು ವಿ.ವಿ ವತಿಯಿಂದ ಬುಧವಾರ ಡಿಜಿಟಲ್ ಲರ್ನಿಂಗ್ ಅಂಡ್ ಮಾನಿಟರಿಂಗ್ ಸೆಲ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀವು ಕಲಿಯುವ ವಿಷಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯತ್ತ ಕೂಡ ಆಸಕ್ತಿವಹಿಸದೆ ನೇರವಾಗಿ ಪರೀಕ್ಷೆ ಎದುರಿಸಿದರೆ ಅದು ಕಷ್ಟಕರವಾಗುತ್ತದೆ. ಜಗತ್ತು ಬದಲಾಗುವುದರ ಜೊತೆಗೆ ನಾವು ಕೂಡ ಬದಲಾಗಬೇಕೆಂದರೆ ಹೊಸ ಹೊಸ ವಿಷಯಗಳ ಕಡೆ ಗಮನಹರಿಸಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲಾ ಒಂದು ವಿಶೇಷ ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಇಂತಹ ಪುನಶ್ಚೇತನ ಕಾರ್ಯಾಗಾರಗಳು ಒಳ್ಳೆಯ ವೇದಿಕೆಯಾಗಿವೆ. ಪಠ್ಯಪುಸ್ತಕದ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡ ಶಿಸ್ತಿನಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಪದವಿ ಎಂಬುದು ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾಗಿದ್ದು, ಈ ಹಂತ ನಿಮ್ಮ ಜೀವನದ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಉದ್ಯಮಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮ ರೂಪಿಸಿ, ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಒದಗಿಸುವ ಮೂಲಕ ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಬೆಂಬಲ ಒದಗಿಸಬಹುದು ಎಂದು ಅಭಿಪ್ರಾಯಪಟ್ಟರು
ಮೊಬೈಲ್ ಅನ್ನು ಅವಶ್ಯವಿದ್ದಷ್ಟೇ ಬಳಸಿ ಪ್ರತಿ ದಿನ, ಪ್ರತಿ ಕ್ಷಣ ಹೊಸ ಹೊಸ ವಿಷಯಗಳತ್ತ ಗಮನಹರಿಸಬೇಕಿದೆ.ನೀವು ಕಲಿಯುವ ವಿಷಯ ಯಾವುದೇ ಇರಲಿ ಆದರೆ ನೀವು ಆಯ್ಕೆ ಮಾಡಿಕೊಳ್ಳುವ ವಿಷಯದಿಂದ ನಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಮೈಸೂರು ವಿ.ವಿ ಪರೀಕ್ಷಾಂಗ ಕುಲಸಚಿವ ಎನ್.ನಾಗರಾಜು ಮಾತನಾಡಿ, ಸಾಮಾಜಿಕ ಜವಾಬ್ದಾರಿ ಎಂಬುದು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಅದನ್ನು ಅರ್ಥೈಸಿ ಕೊಂಡರೆ ಮಾತ್ರ ನಿಮ್ಮ ಮುಂದಿನ ಜೀವನವನ್ನು ಸುಂದರ ಹಾಗೂ ಸರಳಗೊಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸ್ವಯಂ ಕೋರ್ಸ್‌ನ ಮುಖ್ಯಕಾರ್ಯನಿರ್ವಹಕಾಧಿಕಾರಿ ಡಾ.ಕುಮಾರನ್, ಪ್ರೊ.ಎಂ.ಎಸ್.ಸಪ್ನಾ ಮತ್ತಿತರರು ಹಾಜರಿದ್ದರು





