ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪಾಲಿಗೆ ಇಂದು ಬಿಗ್ ಡೇ ಆಗಿದ್ದು, ಸಿಎಂ ಮತ್ತೆ ಮುಡಾ ಕುಣಿಕೆಗೆ ಸಿಲುಕುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಮೈಸೂರು ಮುಡಾ ವಿಚಾರದಲ್ಲಿ ಸಿಎಂ ಹಾಗೂ ಅವರ ಕುಟುಂಬಕ್ಕೆ ಲೋಕಾಯುಕ್ತರು ನೀಡಿರುವ ಕ್ಲೀನ್‌ಚಿಟ್ ಪ್ರಶ್ನಿಸಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಹಾಕಿದ್ದರು.
ಇ.ಡಿ ಕೂಡ ಲೋಕಾಯುಕ್ತ ವರದಿ ಪ್ರಶ್ನಿಸಿ ಅರ್ಜಿ ಹಾಕಿತ್ತು. ಎಲ್ಲರ ವಾದ ಆಲಿಸಿರುವ ನ್ಯಾಯಾಲಯ ಇಂದು ಲೋಕಾಯುಕ್ತ ವರದಿ ಒಪ್ಪಿಕೊಳ್ಳಬೇಕಾ ಅಥವಾ ತಿರಸ್ಕರಿಸಬೇಕಾ ಎಂಬ ಆದೇಶ ನೀಡಲಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪಾಲಿಗೆ ಇಂದು ಬಿಗ್ ಡೇ ಆಗಲಿದ್ದು, ಒಂದು ವೇಳೆ ಲೋಕಾಯುಕ್ತ ವರದಿಯನ್ನು ಕೋರ್ಟ್ ತಿರಸ್ಕಾರ ಮಾಡಿದರೆ ಸಿದ್ದುಗೆ ಭಾರೀ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಕೋರ್ಟ್ ತೀರ್ಪಿನತ್ತ ನೆಟ್ಟಿದೆ.





