ಮೈಸೂರು: ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಲ್ಲಿ, ಅ.7ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸೆಸ್ಕ್ ತಿಳಿಸಿದೆ.
ಎಲ್ಲಾ ಪ್ರವರ್ಗದ ವಿದ್ಯುತ್ ಗ್ರಾಹಕರು, ಸರ್ಕಾರಿ ಇಲಾಖೆಗಳು ಸೇರಿದಂತೆ ತಮ್ಮ ವಿದ್ಯುತ್ ಸ್ಥಾವರಗಳ ಬಾಕಿ ವಿದ್ಯುತ್ ಶುಲ್ಕವನ್ನು 7 ದಿನದೊಳಗೆ ಪಾವತಿಸುವಂತೆ ಮಾಧ್ಯಮಗಳ ಮೂಲಕ 25.09.2024ರಲ್ಲಿ ಕೋರಲಾಗಿತ್ತು. ಆದರೂ, ಬಹುತೇಕ ಗ್ರಾಹಕರು ವಿದ್ಯುತ್ ಬಾಕಿ ಉಳಿಸಿಕೊಂಡಿದ್ದಾರೆ.
ಬಾಕಿ ಇರುವ ವಿದ್ಯುತ್ ಶುಲ್ಕ ಪಾವತಿಗೆ ನಿಗಮದಿಂದ ನೀಡಲಾಗಿದ್ದ 7 ದಿನಗಳ ಗಡುವು ಮುಗಿದಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವ ಎಲ್ಲ ಗ್ರಾಹಕರ, ಸರ್ಕಾರಿ ಇಲಾಖೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗಿದ್ದು, 2024ರ ಅ.7ರಿಂದ ಸಾಮೂಹಿಕ ವಿದ್ಯುತ್ ನಿಲುಗಡೆ ಅಭಿಯಾನದ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ಅಲ್ಲದೇ ವಿದ್ಯುತ್ ಸಂಪರ್ಕ ಕಡಿತದಿಂದ ಉಂಟಾಗುವ ಅನಾನುಕೂಲಗಳಿಗೆ ಯಾವುದೇ ರೀತಿಯಲ್ಲೂ ಸೆಸ್ಕ್ ಜವಾಬ್ದಾರಿ ಆಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಲಾಗಿದೆ.