Mysore
27
broken clouds

Social Media

ಗುರುವಾರ, 08 ಜನವರಿ 2026
Light
Dark

ಮೈಸೂರು ವಿ.ವಿ 106ನೇ ಘಟಿಕೋತ್ಸವ : 30,966 ಅಭ್ಯರ್ಥಿಗಳಿಗೆ ಪದವಿ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವವು ಜ.5ರಂದು ಬೆಳಿಗ್ಗೆ 11:30ಕ್ಕೆ ಕ್ರಾಫರ್ಡ್‌ ಭವನದಲ್ಲಿ ನಡೆಯಲಿದೆ. ಒಟ್ಟು 30,966 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಇವರಲ್ಲಿ 18,612 ವಿದ್ಯಾರ್ಥಿನಿಯರಿದ್ದರೆ, 12,354ವಿದ್ಯಾರ್ಥಿಗಳಿದ್ದಾರೆ ಎಂದು ವಿ.ವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.

ವಿವಿ ಕ್ರಾಫರ್ಡ್ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ 3,551 ವಿದ್ಯಾರ್ಥಿನಿಯರು ಸೇರಿದಂತೆ 5,796 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ 14,850 ವಿದ್ಯಾರ್ಥಿನಿಯರು ಸೇರಿದಂತೆ 24,721 ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಅರ್ಹರಾಗಿದ್ದಾರೆ ಎಂದರು.

449 ಮಂದಿಗೆ ಪಿಎಚ್.ಡಿ
ಈ ಬಾರಿ 449 ಅಭ್ಯರ್ಥಿಗಳು ಪಿಎಚ್.ಡಿ. ಪದವಿ ಪಡೆದುಕೊಳ್ಳುತ್ತಿದ್ದು, ಇವರಲ್ಲಿ 211 ಮಹಿಳೆಯರಿದ್ದರೆ, 238 ಪುರುಷರು. ಕಲಾ ವಿಭಾಗದಲ್ಲಿ 152, ವಾಣಿಜ್ಯ ನಿಕಾಯದಲ್ಲಿ 142, ಶಿಕ್ಷಣ ನಿಕಾಯದಲ್ಲಿ 5, ಕಾನೂನು ನಿಕಾಯದಲ್ಲಿ 1 ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ದಲ್ಲಿ 148 ಅಭ್ಯರ್ಥಿಗಳು ಪಿಎಚ್.ಡಿ. ಪದವಿ ಪಡೆಯಲಿದ್ದಾರೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲ ಘಟಿಕೋತ್ಸವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020-21ನೇ ಸಾಲಿನಲ್ಲಿ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲಾಯಿತು. ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಡಾಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಮಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನಿಂಗ್, ಬಯೋಮೆಡಿಕಲ್ ಅಂಡ್ ರೊಬೊಟಿಕ್ಸ್ ಇಂಜಿನಿಯರಿಂಗ್ ಹಾಗೂ ಸಿವಿಲ್ ಇಂಜಿನಿಯ ರಿಂಗ್ ವಿಭಾಗಗಳನ್ನು ತೆರೆಯಲಾಯಿತು. ಇದೀಗ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ 140 ವಿದ್ಯಾರ್ಥಿಗಳು ಸೋಮವಾರ ನಡೆಯುವ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅದಿತಿಗೆ 24 ಚಿನ್ನದ ಪದಕ:
ಮಾನಸಗಂಗೋತ್ರಿಯಲ್ಲಿ ರಾಸಾಯನ ಶಾಸ್ತ್ರ ವಿಷಯದಲ್ಲಿ ವ್ಯಾಸಂಗ ಮಾಡಿದ ಎನ್.ಅದಿತಿ ಅವರು 24 ಚಿನ್ನದ ಪದಕ ಗಳಿಸಿದ್ದು, 7 ನಗದು ಬಹುಮಾನ ಲಭಿಸಿದೆ. ಆ ಮೂಲಕ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ. ಉಳಿದಂತೆ 442 ಪದಕ ಮತ್ತು 197 ನಗದು ಬಹುಮಾನವನ್ನು 213 ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ, ಇದರಲ್ಲಿ 158 ಮಹಿಳೆಯರೇ ಇದ್ದಾರೆ.

ಉಳಿದಂತೆ ಬಿಎಸ್ಸಿಯಲ್ಲಿ ಹರ್ಮನ್‌ಗೆ 6 ಚಿನ್ನದ ಪದಕ ಹಾಗೂ 6 ನಗದು ಬಹುಮಾನ ಒಲಿದಿದೆ. ಬಿಎನಲ್ಲಿ ವರ್ಣಿಕಾ ಬಿ.ಎಸ್. ಅವರಿಗೆ 5 ಚಿನ್ನದ ಪದಕ ಹಾಗೂ 6 ನಗದು ಬಹುಮಾನ ಬಂದಿದೆ.

 

Tags:
error: Content is protected !!