ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಲ್ಲಿ ಕೇರಳ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣದಲ್ಲಿ ಕೇರಳ ಮೂಲದ ಅಲ್ವಿನ್ (26)ನ್ನು ಭಾನುವಾರ ತಡರಾತ್ರಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
‘ಅಲ್ವಿನ್ ಕೃತ್ಯದಲ್ಲಿ ಭಾಗವಹಿಸಿದ ವ್ಯಕ್ತಿ. ಈ ಹಿಂದೆ ಆರೋಪಿಗಳಿಗೆ ಕಾರು ಒದಗಿಸಿದ ಪ್ರಮೋದ್ ಹಾಗೂ ಕಣ್ಣನ್‌ನ್ನು ಬಂಧಿಸಿದ್ದೆವು. ಈತನ ಬಂಧನದಿಂದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಉಳಿದ ಆರೋಪಿಗಳನ್ನು ನಮ್ಮ ತಂಡ ಶೀಘ್ರ ಬಂಧಿಸಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲ್ಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಮುಸುಕುಧಾರಿಗಳ ತಂಡ ಕೇರಳ ವ್ಯಾಪಾರಿ ಮಹಮ್ಮದ್ ಅಶ್ರಫ್ ಕಾರು ಅಡ್ಡಗಟ್ಟಿ, ಅಶ್ರಫ್ ಮತ್ತು ಕಾರು ಚಾಲಕ ಸೂಫಿ ಮೇಲೆ ಹಲ್ಲೆ ನಡೆಸಿ ಕಾರಿನೊಂದಿಗೆ 1.50 ಲಕ್ಷ ರೂ. ಹಣ ಕಸಿದು ಪರಾರಿಯಾಗಿತ್ತು. ಸಂಜೆ ವ್ಯಾಪಾರಿಯ ಕಾರು ಮತ್ತು ಆರೋಪಿಗಳ ಕಾರು ಪತ್ತೆಯಾಗಿತ್ತು.