ಮೈಸೂರು: ಬೀದರ್ ಹಾಗೂ ಮಂಗಳೂರು ದರೋಡೆ ಮಾಸುವ ಮುನ್ನವೇ ಇದೀಗ ಸಿಎಂ ತವರು ಜಿಲ್ಲೆಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ಮುಸುಕುಧಾರಿ ಲೂಟಿಕೋರರು ದರೋಡೆ ಮಾಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಸಮೀಪದ ರಸ್ತೆ ಮಾರ್ಗದಲ್ಲಿ ಇಂದು ಕೇರಳ ಮೂಲದ ಉದ್ಯಮಿ ಸೂಫಿ ಎಂಬುವವರ ಇನ್ನೋವಾ ಕಾರನ್ನು ಅಡ್ಡಗಟ್ಟಿ ನಗದು ಸಮೇತ ಕಾರನ್ನು ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ.
ಈ ಘಟನೆ ಹಾಡಹಗಲೇ ನಡೆದಿದ್ದು, ದರೋಡೆಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇನ್ನೂ ವಿಷಯ ತಿಳಿದ ಕೂಡಲೇ ಮೈಸೂರು ಎಸ್‌ಪಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ದರೋಡೆಕೋರರು ರಾಜ್ಯ ಬಿಟ್ಟು ಹೋಗದಂತೆ ಎಲ್ಲಾ ಕಡೆಗಳಲ್ಲಿಯೂ ನಾಕಾಬಂಧಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.