ಮೈಸೂರು : ದಸರಾ ಮಹೋತ್ಸವದ ಪ್ರಮುಖ ಕೇಂದ್ರ ಬಿಂದುವಾಗಿರುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡದ 9 ಆನೆಗಳನ್ನು ಮೈಸೂರಿಗೆ ಕರೆತರುವ ಗಜಪಯಣಕ್ಕೆ ವೀರನ ಹೊಸಹಳ್ಳಿಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆನೆಗಳ ಆರೋಗ್ಯ ತಪಾಸಣೆ ನಡೆಸಿ, ಆನೆ ಆಯ್ಕೆ ಸಮಿತಿಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ 14 ಆನೆಗಳನ್ನು ಮೈಸೂರಿಗೆ ಕರೆತರಲು ತೀರ್ಮಾನಿಸಲಾಗಿದೆ. ಈಗಾಗಲೇ ಅನುಮತಿಗಾಗಿ ಇಲಾಖೆಯ ಮುಖ್ಯಸ್ಥರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆ. 4ರಂದು ವೀರನಹೊಸಹಳ್ಳಿ ಗ್ರಾಮದ ಬಳಿ ಗಜಪಯಣ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ನಂತರ ಆನೆಗಳನ್ನು ಮೈಸೂರಿಗೆ ಲಾರಿ ಮೂಲಕ ಕರೆತರಲಾಗುವುದು. ಮೈಸೂರಿಗೆ ಕರೆತರಲಾಗುವ ಆನೆಗಳೊಂದಿಗೆ ಬರುವ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗಾಗಿ ಅರಮನೆ ಆವರಣದ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಕಾರ್ಯವು ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಡಿಸಿಎಫ್ ಡಾ. ಐ. ಬಿ. ಪ್ರಭುಗೌಡ ಅವರು ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು.





