ಮೈಸೂರು: ಮಹಿಳೆಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಹೊರಸಿದ್ದಲ್ಲದೆ, ಅವರಿಗೆ ಬೆದರಿಕೆಯೊಡ್ಡಿ ಚಿನ್ನದ ಓಲೆ ಕಸಿದುಕೊಂಡ ಆರೋಪದ ಮೇರೆಗೆ ಸಮಾಜ ಸೇವಕ ಸೇರಿದಂತೆ ಇಬ್ಬರು ಪತ್ರಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸಮಾಜ ಸೇವಕ ಕೆ.ಎಚ್.ಹನುಮಂತರಾಜ್, ಪತ್ರಕರ್ತರಾದ ರವಿಚಂದ್ರ ಹಂಚ್ಯಾ ಹಾಗೂ ಮಂಜುನಾಥ್ ರನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಪತ್ರಕರ್ತ ಸೂರ್ಯವರ್ಧನ್, ಸಮಾಜ ಸೇವಕರೆಂದು ಬಿಂಬಿಸಿಕೊಂಡಿದ್ದ ಯೋಗೇಶ್ ಹಾಗೂ ದೊರೆಸ್ವಾಮಿ ತಲೆಮರೆಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ನಾವು ಮಾಧ್ಯಮದವರು ಎಂದು ಹೇಳಿಕೊಂಡ ಆರೋಪಿಗಳು ಡಿ.೨೮ರಂದು ಸಂಜೆ ನಗರದ ಹೆಬ್ಬಾಳಿನ ಮಹಿಳೆಯ ಮನೆಗೆ ಹೋಗಿದ್ದಾರೆ. ನೀವು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಬೆದರಿಸಿದ ಅವರು, ನಮ್ಮೊಂದಿಗೆ ಪೊಲೀಸರೂ ಬಂದಿದ್ದಾರೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಾನು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದರೂ ಒಪ್ಪದ ಅವರು, ಈ ವಿಚಾರವನ್ನು ಎಲ್ಲಿಯೂ ಹೇಳದಿರಲು ೧ ಲಕ್ಷ ರೂ. ಹಣ ನೀಡಬೇಕು ಎಂದು ಬೆದರಿಕೆಯೊಡ್ಡಿದರು. ನನ್ನ ಬಳಿ ಅಷ್ಟು ಹಣವಿಲ್ಲವೆಂದು ಆಕೆ ಹೇಳಿದ ವೇಳೆ ಕಿವಿಯಲ್ಲಿರುವ ಚಿನ್ನದ ಓಲೆಯನ್ನು ಬಿಚ್ಚಿಸಿ ಪಡೆದರು ಎಂದು ತಿಳಿಸಿದ್ದಾರೆ.
ನಂತರ ಹಣವನ್ನು ಆದಷ್ಟು ಬೇಗ ನೀಡುವಂತೆ ತಿಳಿಸಿ ಅವರು ತೆರಳಿದ್ದರು. ಘಟನೆಯ ಬಳಿಕ ದೂರು ನೀಡಿದ್ದು, ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಕಿವಿಯೋಲೆ ನೀಡಿರುವ ವಿಚಾರವನ್ನು ಮನೆಯಲ್ಲಿ ತಿಳಿಸಿರಲಿಲ್ಲ. ಅವರನ್ನು ಕರೆದು ಎಚ್ಚರಿಕೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೆ. ನಂತರ ಆರೋಪಿಗಳು ಓಲೆ ವಾಪಸ್ ನೀಡಿ, ೧ ಲಕ್ಷ ರೂ. ನೀಡುವಂತೆ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.