ಮೈಸೂರು: ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರ (ಮುಡಾ) 50:50 ಅನುಪಾತದ ಬದಲಿ ನಿವೇಶನ ಪ್ರಕರಣ ದೇಶದ ಗಮನ ಸೆಳೆದಿದೆ. ಈ ಮಧ್ಯೆ ಮುಡಾದಿಂದ ಮಹತ್ತರ ಬೆಳವಣಿಗೆಯಾಗಿದ್ದು, ಕಾನೂನು ಬಾಹಿರ ಖಾತೆಗಳನ್ನು ಹೊಂದಿರುವವರ ಕಂದಾಯವನ್ನು ರದ್ದುಗೊಳಿಸಲು ಜಿಲ್ಲಾಡಳಿತ ಆದೇಶಿಸಿದೆ.
ಜಿಲ್ಲಾಧಿಕಾರಿ ಹಾಗೂ ಮುಡಾದ ಅಧ್ಯಕ್ಷರು ಆದ ಜಿ.ಲಕ್ಷ್ಮಿಕಾಂತ ರೆಡ್ಡಿ ಅವರು ನಗಾರಾಭಿವೃದ್ಧಿ ಕಾಯ್ದೆಯ ಪ್ರಕಾರ ಕೆಲಸ ಮಾಡಲು ಮುಡಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗಾರಾಭಿವೃದ್ಧಿ ಕಾಯ್ದೆಯ ಪ್ರಕಾರ ಮುಡಾದಲ್ಲಿ ಖಾತೆ ಕಂದಾಯ ಮಾಡುವಂತಿಲ್ಲ. ಆದರೆ ಮುಡಾ ಅಧಿಕಾರಿಗಳು ಈ ನಿಯಮಾವಳಿಯನ್ನು ಗಾಳಿಗೆ ತೂರಿ ಖಾತೆ ಕಂದಾಯ ಮಾಡುತ್ತಿದ್ದರು. ಇದೀಗ ಅವುಗಳನ್ನು ರದ್ದುಗೊಳಿಸಲಾಗಿದೆ.
ಆದಾಗ್ಯೂ ಆಯಾ ವ್ಯಾಪ್ತಿಯ ಕಾರ್ಪೋರೇಷನ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ ಖಾತೆ ತೆರೆಯುವ ಅಧಿಕಾರವನ್ನು ಹಸ್ತಾಂತರ ಮಾಡಲಾಗಿದೆ.
ಬಳಿಕ ಮುಡಾ ನಿವೇಶನಗಳನ್ನು ಖಾತೆ ಕಂದಾಯ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಆದೇಶ ಹೊರಡಿಸಲಾಗಿದೆ. ಈ ಮುಖಾಂತರ ಮುಡಾದಲ್ಲಿ ಮತ್ತಷ್ಟು ದಿನ ಖಾತೆ ಕಂದಾಯ ಸೇರಿ ಇನ್ನಿತರ ಸೇವೆಗಳನ್ನು ರದ್ದು ಮಾಡಲಾಗಿದ್ದು, ಕೇವಲ ಮುಡಾದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳ ಸೇವೆಯಷ್ಟೇ ಲಭ್ಯವಿರಲಿದೆ.





