Mysore
19
overcast clouds
Light
Dark

ಮುಡಾ ಅಕ್ರಮ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ನೂರಾರು ಕೋಟಿ ರೂ. ಗಳ ಹಗರಣ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು(ಜೂ.30) ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮುಡಾ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೋಟ್ಯಂತರ ರೂಪಾಯಿ ಹಗರಣ ಮಾಡಿರುವ ಮುಡ ಆಯುಕ್ತರ ಕ್ರಮ ಖಂಡಿಸಿ ಆಕ್ರೋಶ ಹೊರಹಾಕಿದರು. ಜತೆ ಆಯುಕ್ತರನ್ನು ಈ ಕೂಡಲೇ ಬಂಧಿಸಿ ಎಂದು ಒತ್ತಾಯಿಸಿದರು.

ಸುಮಾರು ನಾಲ್ಕರಿಂದ ಐದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿ, ಮೈಸೂರಿನ ಇತಿಹಾಸದಲ್ಲಿಯೇ ಭಾರೀ ಪ್ರಮಾಣದ ಭೂ ದರೋಡೆ ಮಾಡಿರುವುದು ಮುಡಾದಲ್ಲಿ ಬೆಳಕಿಗೆ ಬಂದಿರುವುದು ಅತ್ಯಂತ ಖಂಡನೀಯ. ಬದಲಿ ನಿವೇಶನ ನೀಡದಂತೆ ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶ ಮಾಡಿದೆ. ಬದಲಿ ನಿವೇಶನದ ಬಗ್ಗೆ ಅತಿ ಅಗತ್ಯ ಬಿದ್ದರೆ ಮಾತ್ರ ಸರ್ಕಾರದ ಅನುಮತಿ ಪಡೆದು ಹಂಚಿಕೆಗೆ ತಾಕೀತು ಮಾಡಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮ ಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿ ಸುಮಾರು 3 ಸಾವಿರ ಕೋಟಿ ಹಗರಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರ ಈ ಬಗ್ಗೆ ಕೂಡಲೇ ತನಿಖೆ ಮಾಡಿ, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಖು. ಜೊತೆಗೆ ಅಕ್ರಮ ಮಾರಾಟ ಮಾಡಿ ಬದಲಿ ನಿವೇಶನ ನೀಡಿರುವ ನಿವೇಶನಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪಧಾಧಿಕಾರಿಗಳಾದ ಪ್ರಭುಶಂಕರ್, ಎಂ ಬಿ, ಕೃಷ್ಣಪ್ಪ, ಕುಮಾರ್ ಗೌಡ, ಶಿವಲಿಂಗಯ್ಯ, ಅಂಬಾ ಅರಸ್, ನೇಹಾ, ಮಂಜುಳಾ, ಭಾಗ್ಯಮ್ಮ, ನಾರಾಯಣಗೌಡ, ಪರಿಸರ ಚಂದ್ರು, ವಿಜಯೇಂದ್ರ, ಆನಂದ್, ರಾಮಕೃಷ್ಣ, ರವಿ ಒಲಂಪಿಯ, ರಾಧಾಕೃಷ್ಣ, ಅಕ್ಬರ್, ರವೀಶ್, ಸ್ವಾಮಿ ಗೌಡ, ಆರ್ ಮಹದೇವ್, ದರ್ಶನ್ ಗೌಡ, ಪ್ರದೀಪ್, ದಿನೇಶ್, ರಘು ಅರಸ್, ವಿಷ್ಣು, ಬಸವರಾಜು, ಹನುಮಂತಯ್ಯ, ರಮೇಶ್, ಗಣೇಶ್, ಶಿವನಾಯಕ್, ಹಾಗೂ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.