Mysore
22
broken clouds
Light
Dark

ಪ್ರತಿಯೊಬ್ಬ ಮತದಾರನು ಸೂಕ್ತವಾದ ವ್ಯಕ್ತಿಗೆ ಕಡ್ಡಾಯವಾಗಿ ಮತದಾನ ಮಾಡಿ: ಡಾ. ಕೆ.ವಿ ರಾಜೇಂದ್ರ

ಮೈಸೂರು: ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬ ಮತದಾರನೂ ಯಾವುದೇ ಜಾತಿ, ಮತ, ಧರ್ಮವನ್ನು ನೋಡದೆ ಸೂಕ್ತವಾದ ವ್ಯಕ್ತಿಗೆ ಕಡ್ಡಾಯವಾಗಿ ಮತಹಾಕುವ ಮೂಲಕ ಹಬ್ಬವನ್ನು ಯಶಸ್ವಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ ಕೆ.ವಿ ರಾಜೇಂದ್ರ ಕರೆ ನೀಡಿದರು.

ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಲಮಂದಿರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಗಬಾರದು. ವಿದ್ಯಾವಂತರು ಮತದಾನದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಜನರಿಗೂ ಇದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ನೈತಿಕ ಮತದಾನ ಮಾಡುವಂತೆ ಮಾಡಬೇಕು ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿದ್ದು, 2021 ರ ವಿಧಾನ ಸಭಾ ಚುನಾವಣೆಯಲ್ಲಿ 75% ರಷ್ಟು ಮತದಾನವಾಗಿತ್ತು ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಮಾಹಿತಿ ನೀಡಿದರು.

ಚುನಾವಣೆಯು ಹತ್ತಿರವಾಗುತ್ತಿದ್ದು, ಪ್ರತಿಯೊಬ್ಬರೂ ವೋಟಿಂಗ್ ಹೆಲ್ಪಿಂಗ್ ಆಪ್ ಮೂಲಕ ತಮ್ಮ ಹೆಸರು ಹಾಗೂ ತಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರದಲ್ಲಿ ತಮ್ಮ ಪೋಲಿಂಗ್ ಸ್ಟೇಷನ್ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಚುನಾವಣೆ ಎಂಬುದು ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ. ನೋ ಯುವರ್ ಪೋಲ್ಲಿಂಗ್ ಸ್ಟೇಷನ್ ಅಭಿಯಾನದಡಿ ಪ್ರತಿಯೊಬ್ಬರೂ ಸಹಕರಿಸಿ, ಒಮ್ಮೆ ತಮ್ಮ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿ ನ್ಯೂನ್ಯತೆಗಳು ಕಂಡುಬಂದರೆ ಅದನ್ನು ಸ್ಥಳೀಯ ಚುನಾವಣಾ ಅಧಿಕಾರಿಗಳಿಂದ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚುನಾವಣೆ ಸಂಬಂಧ ಯಾವುದೇ ಅಕ್ರಮಗಳು ಕಂಡುಬಂದರು ಸಿ ವಿಜಿಲ್ ಆಪ್ ನಲ್ಲಿ ವಿಡಿಯೋ, ಆಡಿಯೋ, ಫೋಟೋ ಹಾಗೂ ಜಿ ಪಿ ಎಸ್ ಮೂಲಕ ಮಾಹಿತಿಯನ್ನು ಸಲ್ಲಿಸಿ ದೂರನ್ನು ನೀಡಬಹುದಾಗಿದ್ದು, ಅಕ್ರಮಗಳ ವಿರುದ್ಧ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದಾಗ ಅವರ ಹೆಸರು ಹಾಗೂ ವಿಳಾಸ ಯಾವುದನ್ನು ಸಹ ಬಹಿರಂಗ ಪಡಿಸುವುದಿಲ್ಲ ಎಂದು ತಿಳಿಸಿದರು.

ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವ ಮತದಾರರ ಕಾರ್ಡ್ ಅನ್ನು ಈಗಾಗಲೇ ಪರೀಕ್ಷಿಸಿ ಅವರಿಗೆ ಅಂಚೆಯ ಮೂಲಕ ಮತದಾರರ ಗುರುತಿನ ಚೀಟಿಯನ್ನು ಮನೆಗೆ ತಲುಪಿಸುವ ಪ್ರಯತ್ನ ಆಗುತ್ತಿದ್ದು, ಒಂದುವೇಳೆ ನಿಮ್ಮ ಅರ್ಜಿ ನೋಂದಣಿಯಾಗಿ ಗುರುತಿನ ಚೀಟಿ ಬರದಿದ್ದರೆ ಅಂತಹ ಮತದಾರರು ತಮ್ಮಲ್ಲಿರುವ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ಗುರುತಿನ ದಾಖಲಾತಿಗಳನ್ನು ತೆಗೆದುಕೊಂಡು ಮತದಾನ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

80 ವರ್ಷ ಮೇಲ್ಪಟ್ಟ ಹಾಗೂ ಶೇಕಡಾ 40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು.

ಬೇರೆ ಬೇರೆ ಸ್ಥಳಗಳಿಂದ ಬಂದಿರುವ ಕಾರ್ಮಿಕರು ಮತದಾನ ಮಾಡುವಲ್ಲಿ ಹಿಂಜರಿಯುತ್ತಿದ್ದು, ಅಂತಹವರಿಗೆ ಮತದಾನದ ಬಗ್ಗೆ ಅರಿವನ್ನು ಮೂಡಿಸಿ ಮತದಾನ ಮಾಡುವಂತೆ ಮಾಡಬೇಕು ಎಂದು ಹೇಳಿದರು.

ಈ ಬಾರಿಯ ಚುನಾವಣೆಯು ವಾರಂತ್ಯದಲ್ಲಿ ಇರುವುದರಿಂದ ಜನರು ಮತದಾನವನ್ನು ನಿರ್ಲಕ್ಷಿಸಿ ಪ್ರವಾಸಕ್ಕೆ ಹೋಗಲು ಸಿದ್ದರಿರುತ್ತಾರೆ. ಆದರೇ ಮತದಾನ ಎಂಬುದು ಪ್ರತಿಯೊಬ್ಬನ ಹಕ್ಕು ಮೊದಲು ಮತದಾನಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ಯೂ ಮ್ಯಾನೇಜ್ ಮೆಂಟ್ ಆಪ್ ಅನ್ನು ಹೋರತರಲಾಗಿದ್ದು, ಇದರಿಂದ ಮತದಾರರು ತಮ್ಮ ಮತಟ್ಟೆಯಲ್ಲಿ ಎಷ್ಟು ಕ್ಯೂ ಇದೆ ಎಂಬುದನ್ನು ತಿಳಿದುಕೊಂಡು ಮತದಾನ ಮಾಡಬಹುದು ಎಂದರು.

ಮೈಸೂರು ಜಿಲ್ಲೆಯಲ್ಲಿ ಮತದಾನ ಪ್ರಾಮುಖ್ಯತೆಯನ್ನು ಹೆಚ್ಚುಸಲು ಜಿಲ್ಲಾ ಚುನಾವಣಾ ರಾಯಭಾರಿಗಳು ತಮ್ಮ ಕೆಲಸದ ಸಮಯದಲ್ಲೂ ಬಿಡುವು ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾಗಿ ಭಾರತದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬನೋತ್,ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಕೆ.ಎಂ ಗಾಯತ್ರಿ, ಪೊಲೀಸ್ ಆಯುಕ್ತರಾದ ರಮೇಶ್ ಬನೋತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್, ಜಿಲ್ಲಾ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎನ್ ಎನ್ ಮಧು, ಚುನಾವಣಾ ಐಕಾನ್ ಗಳಾದ ಕೃಪಾಕರ ಮತ್ತು ಸೇನಾನಿ,ಮಹೇಂದ್ರ, ತನಿಷ್ಕಾ ಮೂರ್ತಿ, ಶ್ರೀನಿವಾಸ್, ಆನಂದ್ ರಾಜ್ ರೂನ್ ವಾಲ, ಮಧುಸೂದನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.