Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬಳ್ಳೆ ಸಾಕಾನೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಆನೆ ನಿಧನ

ಅಂತರಸಂತೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಸಾಕಾನೆ ಶಿಬಿರದಲ್ಲಿದ್ದ ೪೬ ವಯಸ್ಸಿನ ಕುಮಾರಸ್ವಾಮಿ ಎಂಬ ಸಾಕಾನೆ ಮೃತಪಟ್ಟಿದ್ದು, ಕಾಡಿನ ಒಳಭಾಗದಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಸಾಕಾನೆ ಶಿಬಿರದ ಕುಮಾರಸ್ವಾಮಿ ಎಂಬ ಸಾಕಾನೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಈ ವೇಳೇ ಚಿಕಿತ್ಸೆಯನ್ನೂ ನೀಡಲಾಗಿತ್ತು. ಈ ಸಾಕಾನೆಯನ್ನು ಆಹಾರಕ್ಕಾಗಿ ನಿತ್ಯವೂ ಅರಣ್ಯಕ್ಕೆ ಬಿಡಲಾಗುತ್ತಿತ್ತು. ಈ ವೇಳೆ ಕೆಲದಿನಗಳಿಂದ ಕುಮಾರಸ್ವಾಮಿ ಕಾಡಿನಲ್ಲಿ ನಾಪತ್ತೆಯಾಗಿದ್ದು, ಶಿಬಿರಕ್ಕೆ ಬಾರದಿದ್ದ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿದಿನ ಕೂಂಬಿಂಗ್ ಕಾರ್ಯಾಚರಣೆ ಮೂಲಕ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಡಿ.ಬಿ.ಕುಪ್ಪೆ ವಲಯದ ಆನೆಕಲ್ಲುದಿಬ್ಬದ ದಾರಿಯ ಅರಣ್ಯ ಪ್ರದೇಶದಲ್ಲಿ ಕುಮಾರಸ್ವಾಮಿ ಆನೆಯ ಮೃತದೇಹ ಪತ್ತೆಯಾಗಿದೆ.

ಆನೆಕಲ್ಲು ದಿಬ್ಬದದಾರಿ ಅರಣ್ಯ ಪ್ರದೇಶದಲ್ಲಿ ಮುಂಜಾನೆ ಸಿಬ್ಬಂದಿಗಳು ಎಂದಿನಂತೆ ಗಸ್ತು ಮಾಡುತ್ತಿರುವಾಗ, ಒಂದು ಆನೆಯು ಸತ್ತು ಬಿದ್ದಿರುವುದು ಕಂಡುಬಂದಿದ್ದು, ಹತ್ತಿರ ಹೋಗಿ ನೋಡಲಾಗಿ ಅದು ಗಂಡಾನೆಯಾಗಿದ್ದು, ಸದರಿ ಆನೆಯು ಬಳ್ಳೆ ಆನೆ ಶಿಬಿರದ ಕುಮಾರಸ್ವಾಮಿ ಆನೆ ಎಂಬುದು ಗುರುತಿಸಲಾಗಿದೆ ಎಂದು ನಾಗರಹೊಳೆಯ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

೨೦೦೧ರಲ್ಲಿ ಕುಮಾರಸ್ವಾಮಿ ಆನೆಯನ್ನು ಸೆರೆಹಿಡಿಯಲಾಗಿತ್ತು. ಕೂಂಬಿಂಗ್ ಮತ್ತು ಇತರೆ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಾಗುತ್ತಿತ್ತು ಎಂದು ಅವರು ತಿಳಿಸಿದರು.

ಇನ್ನು ನಿಯಮಾವಳಿಗಳಂತೆ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆನೆಯ ಹೊಟ್ಟೆ ಹಾಗೂ ಸಣ್ಣ ಕರುಳಿನಲ್ಲಿ ಸೋಂಕು ಉಂಟಾಗಿ ಮೃತಪಟ್ಟಿರುವುದಾಗಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಿ.ಬಿ.ಪ್ರಸನ್ನ ತಿಳಿಸಿದರು.

ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ರಂಗಸ್ವಾಮಿ, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಎಸ್.ಡಿ.ಮಧು ಮುಂತಾದವರು ಹಾಜರಿದ್ದರು.

Tags: