Mysore
17
few clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕೀರ್ತನೆ ಮೂಲಕ ಕಂದಾಚಾರ ಅಳಿಸಿದ ಕನಕದಾಸ: ಹರೀಶ್‌ಗೌಡ

ಮೈಸೂರು:  ದಾಸಶ್ರೇಷ್ಠ ಸಂತಕವಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ  ಕನಕದಾಸರ ಜಯಂತೋತ್ಸವ ಸಮಿತಿ(ರಿ) ಮೈಸೂರು ಇವರ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ, ದಾಸಶ್ರೇಷ್ಠ ಸಂತ ಕವಿ ಕನಕದಾಸರ 537 ನೇ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಉತ್ತಮ ಕುಟುಂಬದಲ್ಲಿ ಜನಿಸಿದಂತಹ ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹಾಗೂ ಮೌಢ್ಯತೆಗಳನ್ನು ತಿಳಿದು, ತಮ್ಮ ಸಿರಿತನವನ್ನು ತ್ಯಜಿಸಿ ಬಡವರಿಗಾಗಿ ಬಂದವರು ಕನಕದಾಸರು ಎಂದರು.

ಕನಕದಾಸರ ಪ್ರಸಿದ್ಧ ಕೀರ್ತನೆಯಾದ ಕುಲ-ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲವನ್ನೇನಾದರೂ ಬಲ್ಲಿರಾ, ಇದು ಇಂದಿಗೂ ಪ್ರಸ್ತುತವಾದ ಮಾತಾಗಿದೆ. ಜನರಲ್ಲಿದ್ದಂತಹ ಭೇದದ ಮನೋಭಾವ, ಶ್ರೇಷ್ಠತೆಯ ಮನೋಭಾವವನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬುದನ್ನು ಸಾರಿದಂತಹ ದಾಸ ಶ್ರೇಷ್ಠರು ಎಂದು ಹೇಳಿದರು.

ಕನಕದಾಸರ ಕೀರ್ತನೆಯಲ್ಲಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಹೇಳಿದರು.

ಕನಕದಾಸರ ಹಾದಿಯಲ್ಲಿಯೇ ಇಂದು ಸರ್ಕಾರವು ಯಾವುದೇ ಜಾತಿ-ಧರ್ಮವನ್ನು ನೋಡದೆ, ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಸೌಕರ್ಯವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಆಡಳಿತ ಮಾಡುತ್ತಿದ್ದಾರೆ. ಯಾವುದೇ ಸಮಾಜದ ಜನರಿಗೆ ತೊಂದರೆಯಾಗದಂತೆ ಎಲ್ಲಾರ ಪರ ನಿಂತು, ಕೆಲಸ ಮಾಡುತ್ತಿದ್ದಾರೆ. ಶ್ರದ್ದೆ ಭಕ್ತಿಯಿಂದ ಕನಕದಾಸರು ಶ್ರೀ ಕೃಷ್ಣನ ದರ್ಶನ ಪಡೆದಂತೆ, ಸಿದ್ದರಾಮಯ್ಯ ಅವರ ದಕ್ಷ ಹಾಗೂ ಪ್ರಾಮಾಣಿಕ ಆಡಳಿತದಿಂದ ರಾಜ್ಯವನ್ನು ದೇಶದಲ್ಲಿಯೇ ಉತ್ತಮ ಸ್ಥಾನಕ್ಕೆ ಕೊಂಡೋಯ್ದು ಇಡೀ ರಾಷ್ಟ್ರವೇ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡುತ್ತಾರೆ ಎಂದರು.

ಕನಕದಾಸ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಎಂ. ಕೆ. ಸೋಮಶೇಖರ್ ಮಾತನಾಡಿ, ಕಳೆದ 40 ವರ್ಷಗಳಿಂದ ಕನಕದಾಸ ಜಯಂತ್ಯೋತ್ಸವ ಸಮಿತಿ ವತಿಯಿಂದ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, 2008 ರಲ್ಲಿ ಸರ್ಕಾರವು ಜಿಲ್ಲಾಡಳಿತದೊಂದಿಗೆ ಆಚರಿಸಲು ಅನುಮತಿ ನೀಡಿತು. ಅಂದಿನಿಂದ ಸರ್ಕಾರದ ವತಿಯಿಂದ ಅಚ್ಚುಕಟ್ಟಾಗಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನಕದಾಸರು ಮೌಢ್ಯಗಳ ವಿರುದ್ಧ ಹೋರಾಡಿ, ಸಮ ಸಮಾಜವನ್ನು ನಿರ್ಮಿಸಲು ಮುಂದಾದವರು. ಪ್ರಪಂಚದಲ್ಲಿರುವ ಯಾವುದೇ ವ್ಯಕ್ತಿಯು ತನ್ನಿಚ್ಛೆಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ. ಇದಕ್ಕೆ ಯಾವುದೇ ಜಾತಿ-ಧರ್ಮದ ಅವಶ್ಯಕತೆ ಇಲ್ಲ ಎಂದು ಸಾರಿದಂತಹವರು ಕನಕದಾಸರು. ಸಮಾಜಕ್ಕೆ ಕನಕದಾಸರಂತೆಯೇ ಮಹನೀಯರು ಹಲವಾರು ರೂಪು ರೇಷಗಳನ್ನು ನೀಡಿದ್ದಾರೆ ಅವುಗಳನ್ನು ಅನುಸರಿಕೊಂಡು ನಡೆದರೆ ಅದೇ ನಾವು ಅವರಿಗೆ ನೀಡುವ ಗೌರವ ಎಂದರು.

ವಿಧಾನ ಪರಿಷತ್ ನ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಮಾತನಾಡಿ, ಇಂದು ಕನಕದಾಸರ 537 ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಸುಮಾರು 500 ವರ್ಷಗಳಿಗಿಂತಲೂ ಹಿಂದೆ ಜನಿಸಿದಂತಹ ಕನಕದಾಸ ಎಂಬ ಮಹಾನ್ ವ್ಯಕ್ತಿಯು ತನ್ನೆಲ್ಲ ಸಿರಿತನವನ್ನು ಬಿಟ್ಟು ಬಡವರ ಕಷ್ಟವನ್ನು ಅರಿತು ಅವರಿಗೆ ಸ್ಪಂದಿಸಲು ಮುಂದಾದರು. ಇಂತಹ ವ್ಯಕ್ತಿಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.

ಸುಮಾರು 316 ಕೀರ್ತನೆಗಳನ್ನು ರಚಿಸಿರುವ ಕನಕದಾಸರು ತಮ್ಮಲ್ಲಿರುವ ಶ್ರದ್ದೆ, ಭಕ್ತಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆದರು. ಇದಕ್ಕೆ ಸಾಕ್ಷಿಯಾಗಿ ಇಂದು ಉಡುಪಿಯಲ್ಲಿರುವ ಕನಕನ ಕಿಂಡಿಯನ್ನು ಕಾಣಬಹುದಾಗಿದೆ. ಇದರಿಂದ ಕನಕದಾಸರ ಸಾಧನೆ, ಶಕ್ತಿಯು ತಿಳಿಯುತ್ತದೆ ಎಂದು ಹೇಳಿದರು.

ಯಾವುದೇ ವ್ಯಕ್ತಿಗೆ ಶಕ್ತಿ ಬರಬೇಕೆಂದರೆ ಸಾಧನೆ ಮುಖ್ಯವಾಗುತ್ತದೆ. ಸಾಧನೆ ಮಾಡಲು ಪರಿಶ್ರಮ ಮುಖ್ಯ. ತಮ್ಮನ್ನು ತಾವು ನಂಬಿ ಇತರರಿಗೆ ಕೇಡನ್ನು ಬಯಸದೆ ಉತ್ತಮ್ಮ ದಾರಿಯಲ್ಲಿ ತನ್ನ ಸಾಧನೆಯ ದಾರಿಯಲ್ಲಿ ನಡೆದರೆ ಅದಕ್ಕೆ ಒಳ್ಳೆಯ ಪ್ರತಿಫಲ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ. ಶಿವಾನಂದ ಪುರಿ ಸ್ವಾಮೀಜಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಜಿಲ್ಲಾಧಿಕಾರಿಗಾಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಎಂ. ಗಾಯತ್ರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಸೇರಿದಂತೆ ಸಂತ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘ -ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Tags:
error: Content is protected !!