Mysore
22
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಪತ್ರಿಕೋದ್ಯಮ : ವಿದ್ಯಾರ್ಹತೆ ಜೊತೆ ಕೌಶಲ ಮುಖ್ಯ

ಮೈಸೂರು: ಪತ್ರಿಕೋದ್ಯಮದ ದಾರಿ ಹಿಡಿಯುವ ವಿದ್ಯಾರ್ಥಿಗಳು ಅಧ್ಯಯನದ ಜೊತೆ ಜಾಗತಿಕ ವಿದ್ಯಮಾನಗಳ ಅರಿವು, ಕೌಶಲ್ಯಗಳನ್ನು ಅರಿಯಬೇಕಿದೆ  ಎಂದು ಪ್ರಜಾವಾಣಿಯ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಹೇಳಿದರು.

ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ” ಡೆಸ್ಕ್ ವರ್ಕ್ ಮತ್ತು ವರದಿಗಾರಿಕೆ” ವಿಷಯ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ವರದಿಗಾರಿಕೆಗೆ ತೆರಳುವ ಮುನ್ನ ಅನ್ಲೈನ್ ವಿಷಯವಾದರೂ ಸರಿ, ಪುಸ್ತಕಗಳ ಮೂಲಕವಾದರೂ ಒಂದು ವಿಷಯದ ಪೂರ್ಣ ಮಾಹಿತಿಯನ್ನು ವರದಿಗಾರರು ತಿಳಿದಿರಬೇಕು ಎಂದು ಸಲಹೆ ನೀಡಿದರು.

ಡೆಸ್ಕ್ ವರ್ಕ್ ಮತ್ತು ವರದಿಗಾರರು ಒಂದೇ ಸಂಸ್ಥೆಯ ಎರಡು ಕಣ್ಣುಗಳಿದ್ದಂತೆ. ಪ್ರತಿಯೊಂದು ಸಂಸ್ಥೆಯಲ್ಲಿಯೂ ವರದಿಗಾರಿಕೆಯೂ ಇರುತ್ತದೆ ಹಾಗೇ ಸಂಪಾದಕೀಯ ತಂಡವು ಇರುತ್ತದೆ, ಎರಡು ಕೂಡ ವಿಭಿನ್ನವಾಗಿ ಕಾರ್ಯನಿರ್ವಹಿಸಿದರೂ, ವರದಿಗಾರನಿಗೆ ಸಂಪಾದಕನ ಕೆಲಸ ಹಾಗೂ ಸಂಪಾದಕನಿಗೆ ವರದಿಗಾರಿಕೆಯು ತಿಳಿದಿರಬೇಕು ಎಂದು ಅವರು ಹೇಳಿದರು.

ಒಬ್ಬ ಉತ್ತಮ ವರದಿಗಾರನಾದಾಗ ಮಾತ್ರ ಉತ್ತಮ ಸಂಪಾದಕನಾಗಲು ಸಾಧ್ಯ, ಹಾಗೆಯೇ ಉತ್ತಮ ಸಂಪಾದಕನಿಗೆ ವರದಿಗಾರನ ವಿಷಯ ಮತ್ತು ವಸ್ತುಪ್ರಜ್ಞೆ ತಿಳಿದಿರಬೇಕು. ಯಾವುದೇ ವಿಷಯದ ಬಗ್ಗೆ ಬರೆಯುವಾಗ ಅಥವಾ ವರದಿಗಾರಿಕೆ ಮಾಡುವಾಗ ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಿದಾಗ ಮಾತ್ರ ಅದರ ಕುರಿತಾದ ಸಂಪೂರ್ಣ ಚಿತ್ರಣಗಳು ನಮಗೆ ಸಿಗುತ್ತದೆ ಎಂದು ಹೇಳಿದರು.

ತಮ್ಮ ವರದಿಗಾರಿಕೆಯ ಅನುಭವಗಳ ಬಿಚ್ಚಿಡುತ್ತ ಹಲವು ಮುಖ್ಯ ವರದಿಗಾರಿಕೆಗಳ ಕುರಿತು ವಿವರಿಸಿದರು. ಒಬ್ಬ ಪತ್ರಕರ್ತನಿಗೆ ಇರಬೇಕಾದಂತಹ ಗುಣಗಳು ಯಾವುದು? ಆತ ಹೇಗೆ ಒಂದು ವಿಷಯವನ್ನು ವರದಿಗಾರಿಕೆ ಮಾಡಬೇಕು? ಎಂಬುದನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಉಪನ್ಯಾಸದ ನಂತರ ವಿದ್ಯಾರ್ಥಿಗಳಲ್ಲಿದ್ದ ಹಲವು ಗೊಂದಲಗಳಿಗೆ ಸೂಕ್ತವಾದ ಉತ್ತರಗಳನ್ನು ನೀಡಿ ಸಂವಾದವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಎನ್ ಮಮತ , ಅತಿಥಿ ಉಪನ್ಯಾಸಕ ಡಾ ಕುಮಾರಸ್ವಾಮಿ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Tags:
error: Content is protected !!