ಮೈಸೂರು: ನನಗೆ ಒಂದು ನಿವೇಶನವೂ ಇಲ್ಲ. ನಿವೇಶನಕ್ಕಾಗಿ ಯಾರ ಬಳಿ ಮನವಿ ಕೂಡ ಮಾಡಿಲ್ಲ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.
ಈ ಕುರಿತು ಜೆಡಿಎಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯನವರ ಲೇಟರ್ ಒಂದನ್ನು ಹಂಚಿಕೊಂಡಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮೈಸೂರು ನಗರಾಭಿವೃದ್ಧಿ ಮಂಡಳಿಯಿಂದ ಜೆಡಿಎಸ್ ಈ ಲೇಟರ್ ಬಹಿರಂಗಗೊಳಿಸಿದೆ.
“ಗುಳಿಗೆ ಸಿದ್ದ ಒಳಗೆ ಮೇಯಿದ” ಈ ಮಾತು ನಿಮ್ಮಂಥವರನ್ನು ನೋಡಿಯೇ ಹೇಳಿರಬೇಕು ಸಿದ್ದರಾಮಯ್ಯನವರೇ… ಎಂದು ಜೆಡಿಎಸ್ ಟೀಕಿಸಿದೆ.
“ನನಗೆ ಒಂದು ನಿವೇಶನವೂ ಇಲ್ಲ. ಯಾವುದೇ ಲೆಟರ್ ಬರೆದಿಲ್ಲ” ಎಂದು ಸುಳ್ಳು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಸಮಾಜವಾದಿ ಮುಖವಾಡ ತೊಟ್ಟು ನೀವು ಮಾಡಿರುವ ಅಕ್ರಮಗಳಿಗೆ ಈ ಲೆಟರ್ ಸಾಕ್ಷಿ ಎಂದು ವ್ಯಂಗ್ಯವಾಡಿದೆ.
ಬದಲಿ ನಿವೇಶನ ಕೋರಿ ನೀವೇ ಸ್ವತಃ ಬರೆದಿರುವ ಪತ್ರ, ನಿಮ್ಮದೇ ಸಹಿ…ಇಷ್ಟು ಸಾಕಲ್ಲವೇ ? ಇದು ನಿಮಗೆ ಕಪ್ಪು ಚುಕ್ಕೆ ಅಲ್ಲವೇ …?
ದಿನ ಪತ್ರಿಕೆಗಳು, ಮಾಧ್ಯಮಗಳ ಸಂದರ್ಶನಗಳಲ್ಲಿ ನಾನು ಶುದ್ಧ ಹಸ್ತ, ಸಮಾಜವಾದಿ ಎಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುವ ನಿಮ್ಮ ಅಸಲೀ ಬಂಡವಾಳ ಈಗ ಬಯಲಾಗಿದೆ… ದಲಿತರ ಜಮೀನು ಕಬಳಿಸಿರುವ ನೀವು ಪರಿಶಿಷ್ಟ ಸಮುದಾಯಕ್ಕೆ ವಂಚಿಸಿದ್ದೀರಿ, ಸುಳ್ಳುಗಳ ಮೇಲೆ ಸುಳ್ಳಗಳನ್ನು ಹೇಳುತ್ತಾ ನಾಡಿನ ಜನರಿಗೂ ನಂಬಿಕೆ ದ್ರೋಹ ಎಸಗಿದ್ದೀರಿ. ಇದೇನಾ ನಿಮ್ಮ ಶುದ್ಧವಾದ ರಾಜಕೀಯ ಜೀವನ ..? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರೇ ನಿಮಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆಯು ಉಳಿದಿಲ್ಲ. ಮೊದಲು ರಾಜೀನಾಮೆ ಕೊಟ್ಟು ನಿರ್ಗಮಿಸಿ ಎಂದು ಜೆಡಿಎಸ್ ಆಗ್ರಹಿಸಿದೆ.