Mysore
28
broken clouds
Light
Dark

ಜೆಡಿಎಸ್ ಬಿಡಲ್ಲ: ಭಾವುಕ ಹೇಳಿಕೆ ನೀಡಿದ ಜಿಟಿಡಿ

ಮೈಸೂರು :ತಾವು ಜೆಡಿಎಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಶಾಸಕ ಜಿ.ಟಿ.ದೇವೇಗೌಡ, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಎದುರು ಭಾವುಕರಾಗಿ‌ ಹೇಳಿದ್ದಾರೆ.

ಇಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಜಿ.ಟಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ನಡೆಸಿದ ಮಾತುಕತೆ ಫಲಪ್ರದವಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ತಮ್ಮ ಬಗ್ಗೆ ದೇವೇಗೌಡರಿಗೆ ತುಂಬಾ ಪ್ರೀತಿ ಇದೆ. ನನ್ನನ್ನು ಮರಿ ದೇವೇಗೌಡ ಎಂದು ಕರೆಯುತ್ತಿದ್ದರು. ನಾನು ಮೂರು ವರ್ಷಗಳಿಂದ ಜೆಡಿಎಸ್ ನಿಂದ ದೂರ ಉಳಿದಿದ್ದೆ. ಆದರೂ ದೇವೇಗೌಡರು ಹಾಗೂ ಪಕ್ಷದ ಬಗ್ಗೆ ಪ್ರೀತಿ ಕಡಿಮೆಯಾಗಿರಲಿಲ್ಲ ಎಂದು ಹೇಳಿದರು.ಬಹಳ ಕಷ್ಟಪಟ್ಟು ದೇವೇಗೌಡರು ಪ್ರಾದೇಶಿಕ ಪಕ್ಷವನ್ನು ಉಳಿಸಿದ್ದಾರೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಕನಸನ್ನು ನಾವೆಲ್ಲರೂ ಸೇರಿ ನನಸು ಮಾಡುತ್ತೇವೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮಗುರಿ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿಯವರು ಕರೆದಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ಜೆಡಿಎಸ್‌ನಲ್ಲೇ ಉಳಿಯುತ್ತೇನೆ, ಈ ಪಕ್ಷಕ್ಕೆ ಯಾವುದೇ ಕಳಂಕ ತರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಜಿ.ಟಿ.ದೇವೇಗೌಡ ಭಾವುಕರಾದರು.

ಇದೇ ವೇಳೆ ಮಾತಾನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ನಾನು ಜಿಟಿಡಿ ಅವರನ್ನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಜಿಟಿಡಿ ಬೆಳೆಯಬಾರದು ಎಂಬ ಕಾರಣಕ್ಕಾಗಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರು. ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕು. ನಮ್ಮ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ