ನಂಜನಗೂಡು: 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಂಜನಗೂಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಂಜನಗೂಡು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಕುಮಾರ್ ಅವರು, ಪುರಾತನ ಕಾಲದಿಂದಲೂ ಯೋಗಾಸನ ನಡೆದು ಬಂದಿದೆ. ಭಾರತದ ಪರಂಪರೆಯಾದ ಯೋಗಾಸನವನ್ನು ಈಗ ಎಲ್ಲಾ ದೇಶಗಳಲ್ಲಿಯೂ ಅಳವಡಿಸಿಕೊಂಡಿದ್ದಾರೆ.
ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಒಂದು ಪ್ರಮುಖ ಹೆಜ್ಜೆ. ಪ್ರತಿನಿತ್ಯ ಬೆಳಿಗ್ಗೆ ಕನಿಷ್ಠ ೩೦ ನಿಮಿಷಗಳಾದರೂ ಧ್ಯಾನ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಢತೆ ಸುಧಾರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಮುದ್ದು ಮಾದೇಗೌಡ ಅವರು, ಕೆಲವು ಯೋಗಾಸನಗಳನ್ನು ಮಾಡಿದ್ದಲ್ಲದೇ, ಮಕ್ಕಳಿಂದಲೂ ಮಾಡಿಸಿ ಖುಷಿಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಗೀತಾ, ಸಹಶಿಕ್ಷಕಿ ತಾರಾ, ಅಡುಗೆ ಸಿಬ್ಬಂದಿ ಸರಸ್ವತಿ, ಗಾಯತ್ರಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.