ಮೈಸೂರು : ಭಾರತದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯನ್ನು ಕರ್ನಾಟಕದ ಬಂಡೀಪುರ, ನಾಗರಹೊಳೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿ 9 ರಿಂದ 13ರ ವರೆಗೆ ಈ ಶೃಂಗಸಭೆ ನಡೆಯಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಗ್ಲೋಬಲ್ ಬಿಗ್ ಕ್ಯಾಟ್ ಅಲಯನ್ಸ್ ಯೋಜನೆ ಘೋಷಣೆ ಮಾಡಿದ್ದು, ಫೆ.9 ರಿಂದ 13ರ ವರೆಗೆ ನಡೆಯುವ ಶೃಂಗಸಭೆಯಲ್ಲಿ ವಿಶ್ವದ 18 ದೇಶಗಳ ಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಹಾಗೂ ಮಧ್ಯಪ್ರದೇಶ ಸೇರಿದಂತೆ ಇತರೆಡೆ ಹುಲಿ ವಾಸಸ್ಥಾನಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ, ಅರಣ್ಯದಲ್ಲಿರುವ ಗಿರಿಜನರ ಪುನರ್ವಸತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೇಶ-ವಿದೇಶಗಳ ತಜ್ಞರು ತಮ್ಮ ತಮ್ಮ ಅಭಿಪ್ರಾಯವನ್ನು ಇಲ್ಲಿ ದಾಖಲು ಮಾಡಲಿದ್ದಾರೆ.
ಗ್ಲೋಬಲ್ ಬಿಗ್ ಕ್ಯಾಟ್ ಅಲಯನ್ಸ್ ಯೋಜನೆ ಘೋಷಿಸಿದ ಬೆನ್ನಲ್ಲೇ ಸಿದ್ಧತೆಗಳು ಆರಂಭಗೊಂಡಿವೆ. ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆಗೆ ಇನ್ನೂ 3 ದಿನಗಳು ಮಾತ್ರ ಬಾಕಿ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಸಂಯುಕ್ತವಾಗಿ ಈ ಕಾರ್ಯಾಗಾರ ಆಯೋಜನೆ ಮಾಡಿವೆ. ಭಾರತವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಹಾಗಾಗಿ ಈ ಮಹತ್ವದ ಕಾರ್ಯಕ್ರಮಕ್ಕೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳನ್ನು ಆಯ್ಕೆ ಮಾಡಿರುವುದು ವಿಶೇಷ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಶೃಂಗಸಭೆ
ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆ ಕರ್ನಾಟಕದಲ್ಲಿ ನಡೆಯುತ್ತಿರುವುದು ಮಹತ್ವ ಪಡೆದಿದೆ. ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆ ಹಾಗೂ ಅತಿ ಹೆಚ್ಚಾಗಿರುವ ಹುಲಿಗಳ ಬಗ್ಗೆ ಈ ಶೃಂಗಸಭೆ ಜಾಗತಿಕ ಗಮನ ಸೆಳೆಯಲಿದೆ. ನಾಲ್ಕು ದಿನಗಳ ಶೃಂಗಸಭೆಯಲ್ಲಿ ಹುಲಿಗಳ ಸಂರಕ್ಷಣೆ ಕುರಿತಂತೆ ಚರ್ಚೆ ನಡೆಯಲಿದೆ. ಅದರಲ್ಲೂ ಆಧುನಿಕ ತಂತ್ರಜ್ಞಾನ ಬಳಕೆ, ಅಂತಾರಾಷ್ಟ್ರೀಯ ಸಹಕಾರ ಹಾಗೂ ಉತ್ತಮ ಕಾರ್ಯ ನಿರ್ವಹಣೆ ಕುರಿತು ಸಮಾಲೋಚನೆ ಕೂಡ ನಡೆಯಲಿದೆ.





