Mysore
25
broken clouds

Social Media

ಭಾನುವಾರ, 25 ಜನವರಿ 2026
Light
Dark

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ರೆಸಾರ್ಟ್‌ಗಳು, ಕಟ್ಟಡಗಳನ್ನು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣ ತೆರವು ಗೊಳಿಸುವಂತೆ ಒತ್ತಾಯಿಸಿ ಸೇವ್ ಕಬಿನಿ ಮತ್ತು ರೈತ ಸಂಘಟನೆಗಳು ನಡೆಸುತ್ತಿದ್ದ ಅನಿರ್ದಿಷ್ಟ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಭರವಸೆಯ ಮೇರೆಗೆ ಅಂತ್ಯಗೊಳಿಸಲಾಗಿದೆ.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ರೈತ ಸಂಘಟನೆಗಳು, ರೈತ ಮುಖಂಡರು ವನ್ಯಜೀವಿ ಪರಿಸರ ಪ್ರೇಮಿಗಳು ಸೇವ್ ಕಬಿನಿ ಹೆಸರಿನಲ್ಲಿ ಮಂಗಳವಾರದಿಂದ ಅನಿರ್ದಿಷ್ಟ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಈ ವಿಚಾರ ತಿಳಿದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಯವರು ಕೋಟೆ ತಹಸಿಲ್ದಾರ್ ಶ್ರೀನಿವಾಸ್ ಅವರಿಗೆ ದೂರವಾಣಿ ಕರೆ ಮಾಡಿ, ರೈತರು ಪ್ರತಿಭಟನೆಯನ್ನು ಕೈಬಿಡಬೇಕು. ಒಂದು ತಿಂಗಳ ಒಳಗಾಗಿ ರೆಸಾರ್ಟ್‌ಗಳ ವರದಿಗಳನ್ನು ಪಡೆದು ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸುವಂತೆ ಸೂಚಿಸಿದರು.

ಸಂಜೆ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಜಿಲ್ಲಾಧಿಕಾರಿಗಳು ನೀಡಿದ್ದ ಭರವಸೆಯನ್ನು ತಿಳಿಸಿದಾಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರಿಗೆ ದೂರವಾಣಿಯಲ್ಲಿ ಮಾತನಾಡಿ, ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ತಿಂಗಳು ಜಿಲ್ಲಾಧಿಕಾರಿ ಕಚೇರಿ ಅಥವಾ ಕೋಟೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಸೇವ್ ಕಬಿನಿ ತಂಡದ ವಕೀಲ ರವಿಕುಮಾರ್, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಮಂಜು ಕಿರಣ್, ರವಿಕುಮಾರ್, ಜಕ್ಕಳ್ಳಿ ಮಹೇಂದ್ರ, ನಾಗರಾಜು, ಪಳಿನಿ ಸ್ವಾಮಿ, ಕಾಶಿಪತಿ, ಜಗದೀಶ್, ಗುರುಪ್ರಸಾದ್, ಶಿವಶಂಕರ್, ಮಧು, ದೊರೆಸ್ವಾಮಿ, ಶಿವಲಿಂಗಪ್ಪ, ಹೊ.ಕೆ.ಮಹೇಂದ್ರ, ಗೋವಿಂದೇಗೌಡ, ಜೆ.ಪಿ.ನಾಗರಾಜ್, ಪರಮೇಶ್, ರವಿಕುಮಾರ್, ಭಾನುಮೋಹನ್, ಕುಮಾರಸ್ವಾಮಿ, ಸತೀಶ, ರಾಜೇಶ, ಸುನಿಲ್, ದಾಸೇಗೌಡ, ಕಬಿನಿ ಶಿವಲಿಂಗ, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ರಾಜೇಶ್, ಇತರರು ಹಾಜರಿದ್ದರು.

 

Tags:
error: Content is protected !!