ನಂಜನಗೂಡು : ಪತ್ನಿಯ ಅಕ್ರಮ ಸಂಬಂಧ ವಿರೋಧಿಸಿದ ಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಇಂದಿರಾನಗರ ಗ್ರಾಮದಲ್ಲಿ ನಡೆದಿದೆ.
ಪತಿಯ ಮರ್ಮಾಂಗ ಹಿಸುಕಿ ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಪತಿಯ ಮೃತದೇಹವನ್ನ ನೇಣಿನ ಕುಣಿಕೆಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸುವ ವೇಳೆ ಕಿಲಾಡಿ ಪತ್ನಿ ಸಿಕ್ಕಿಬಿದ್ದಿದ್ದಾಳೆ.
ಇಂದಿರಾನಗರ ಗ್ರಾಮದ ಚಿಕ್ಕ ಯಜಮಾನ ಹಾಗೂ ಸಮಸ್ಯೆಗಳಿಗೆ ನ್ಯಾಯ ನೀಡುತ್ತಿದ್ದ ವೀರಣ್ಣ(41) ಮೃತ ದುರ್ದೈವಿ.
ಆರೋಪಿ ಶಿವಮ್ಮ(35) ಇದೀಗ ಹುಲ್ಲಹಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ. 13 ವರ್ಷಗಳ ಹಿಂದೆ ಇಬ್ಬರ ವಿವಾಹ ನೆರವೇರಿತ್ತು. ಇಬ್ಬರು ಗಂಡು ಮಕ್ಕಳಿದ್ದರು. ಕಳೆದ ನಾಲ್ಕು ವರ್ಷದಿಂದ ಹೆಚ್.ಡಿ.ಕೋಟೆಯ ಬಲರಾಮ ಎಂಬಾತನ ಜೊತೆ ಶಿವಮ್ಮ ಪರಿಚಯ ಆಗಿತ್ತು. ಇದು ಅಕ್ರಮ ಸಂಬಂಧಕ್ಕೂ ದಾರಿ ಆಗಿತ್ತು. ಈ ವಿಚಾರ ಪತಿ ವೀರಣ್ಣಗೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈ ವಿಚಾರದಲ್ಲಿ ನ್ಯಾಯ ಪಂಚಾಯ್ತಿ ಸಹ ನಡೆದಿತ್ತು. ಹಲವು ಬಾರಿ ಆತನ ಸಂಪರ್ಕ ಬಿಡುವಂತೆ ಬುದ್ದಿ ಹೇಳಲಾಗಿತ್ತು. ಹೀಗಿದ್ದೂ ಶಿವಮ್ಮ ಹಾಗೂ ಬಲರಾಮ್ ನಡುವೆ ಸಂಬಂಧ ಮುಂದುವರೆದಿತ್ತು. ನಿನ್ನೆ ರಾತ್ರಿ ಬಲರಾಮ ಫೋನ್ ಮಾಡಿದ್ದಾನೆ. ಈ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ಆಗಿದೆ. ರಾತ್ರಿ ಊಟ ಮಾಡಿ ಪತಿ ಮಲಗಿದ್ದಾರೆ. ಕೆಲವೇ ಸಮಯದಲ್ಲಿ ಶಿವಮ್ಮ ಬಾಯಿ ಬಡಿದುಕೊಂಡು ಮನೆಯಿಂದ ಹೊರಬಂದಿದ್ದಾಳೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಾಳೆ. ಕುತ್ತಿಗೆಯಲ್ಲಿ ಸೀರೆ ಕಂಡು ಬಂದಿದೆ. ಮಾಹಿತಿ ಅರಿತ ಹುಲ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ಮಾಡಿದಾಗ ಬಲರಾಮನ ಜೊತೆ ಸಂಬಂಧ ಬಿಚ್ಚಿಟ್ಟಿದ್ದಾಳೆ. ಪತಿಯ ಮರ್ಮಾಂಗ ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಿವಮ್ಮಳನ್ನ ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಗಿದೆ. ಊರಿಗೆ ನ್ಯಾಯ ಹೇಳುತ್ತಿದ್ದ ವೀರಣ್ಣ ಪತ್ನಿ ಸಂಚಿಗೆ ಬಲಿಯಾಗಿರುವುದು ದುರಂತ. ಸದ್ಯ ಹುಲ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.





