ಹುಣಸೂರು : ಸದಾ ಜನನಿಬಿಡ ಪ್ರದೇಶವಾದ ಹುಣಸೂರು ಬಸ್ ನಿಲ್ದಾಣ ಹಿಂಭಾಗದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜ್ಯುಯಲರಿ ಅಂಗಡಿಯಲ್ಲಿ ಭಾನುವಾರ ಮಟ ಮಟ ಮಧ್ಯಾಹ್ನವೇ ನಡೆದ ಚಿನ್ನಾಭರಣ ದರೋಡೆ ಪ್ರಕರಣ ಹುಣಸೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದಾರೆ.
ಈ ಇನ್ನೂ ತನಿಖೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಷ್ಣುವರ್ಧನ್, ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಚಹರೆಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 7 ಕೆ.ಜಿ. ಚಿನ್ನಾಭರಣ ದರೋಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂಗಡಿ ಮಾಲೀಕರ ಪಾತ್ರ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದು ಈಗಾಗಲೇ 24 ಗಂಟೆಗಳಾಗಿದ್ದು, ತನಿಖೆ ಚುರುಕಾಗಿ ಸಾಗುತ್ತಿದೆ. ಆರೋಪಿಗಳ ಬಂಧನಕ್ಕಾಗಿ ಐದು ಇನ್ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿವೆ ಎಂದಿದ್ದಾರೆ.
ಜ್ಯುಯಲರಿ ಅಂಗಡಿಯಲ್ಲಿ ಬೆಳಗಿನ ಸಮಯದಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇರಬೇಕಾಗಿತ್ತು, ಆದರೆ ಇಲ್ಲಿ ಆ ವ್ಯವಸ್ಥೆ ಇರಲಿಲ್ಲ. ರಾತ್ರಿಯ ವೇಳೆಗೆ ಮಾತ್ರ ಸೆಕ್ಯೂರಿಟಿ ಇಡಲಾಗಿರುವುದು ಹಾಗೂ ಸಾರ್ವಜನಿಕ ಹಾಗೂ ಗ್ರಾಹಕರ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದು ಸಹ ತನಿಖೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ಪ್ರಮುಖ ತನಿಖಾ ಆಯಾಮಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದಷ್ಟು ಬೇಗ ಆರೋಪಿಗಳನ್ನು ಸೆರೆ ಹಿಡಿಯಲಾಗುತ್ತದೆ ಎಂದು ಭರವಸೆ ನೀಡಿದರು.
ಇದಲ್ಲದೆ, ಕಳೆದ ಆರು ತಿಂಗಳ ಹಿಂದೆ ಹುಣಸೂರಿನ ಎಲ್ಲಾ ಚಿನ್ನಾಭರಣ ಅಂಗಡಿ ಮಾಲೀಕರ ಸಭೆ ನಡೆಸಿ, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಆ ಸೂಚನೆಗಳ ಅನುಷ್ಠಾನ ಕುರಿತು ಮರುಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.





