ಹುಣಸೂರು: ಸ್ಯಾಂಟ್ರೋ ಕಾರು ಡಿಕ್ಕಿ ಒಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಹಾಳಗೆರೆ ಜಂಕ್ಷನ್ ಬಳಿ ನಡೆದಿದೆ.
ನಗರದ ಕಾಫಿ ವರ್ಕ್ಸ್ ಆವರಣದಲ್ಲಿರುವ ಶೀತಾ ಟ್ರೇಡರ್ಸ್ ಮಾಲೀಕ ರವಿ ಸಾಲಿಯಾನ ಉರುಫ್ ವಾಲೆ ರವಿ (೪೪) ಮೃತಪಟ್ಟವರು.
ಶನಿವಾರ ರಾತ್ರಿ ೧೦.೩೦ರ ಸಮಯದಲ್ಲಿ ರವಿ ಸಾಲಿಯಾನ ತಮ್ಮ ಸ್ಕೂಟರ್‌ನಲ್ಲಿ ಹಾಳಗೆರೆಯಲ್ಲಿನ ಸ್ನೇಹಿತರ ಮನೆಗೆ ಊಟಕ್ಕೆಂದು ತೆರಳಿ ವಾಪಸ್ ಬರುವಾಗ ನಗರದ ಹೊರವಲಯ ಹಾಳಗೆರೆ ಜಂಕ್ಷನ್ ಬಳಿ ಎದುರಿನಿಂದ ಬಂದ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆದ ಪರಿಣಾಮ ರವಿರವರ ತಲೆಗೆ ತೀವ್ರ ಪೆಟ್ಟಾಗಿ, ಹುಣಸೂರಿನ ಸಾರ್ವಜನಿಕ ಅಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಸ್ಮಶಾನದಲ್ಲಿ ಸಂಜೆ ೫ ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಸಲಾಯಿತು. ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮತ್ತಿತರರು ಸಾಂತ್ವನ ಹೇಳಿದ್ದಾರೆ.





