ಹುಣಸೂರು : ತಾಲ್ಲೂಕಿನ ಹೈರಿಗೆ ಗ್ರಾಮದ ಬಳಿ ಸೋಮವಾರ ಆತಂಕ ಮೂಡಿಸಿದ್ದ ಹುಲಿ ಪತ್ತೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದ್ದು, ಸಾಕಾನೆಗಳಾಗಿ ಭೀಮ ಹಾಗೂ ಜೂನಿಯರ್ ಅಭಿಮನ್ಯು ಸಹಾಯದಿಂದ ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿದೆ. ಆದರೆ ಹುಲಿ ಇನ್ನೂ ಪತ್ತೆ ಆಗಿಲ್ಲ.
ಆರ್ ಎಫ್ ಓ ನಂದಕುಮಾರ್ ಹಾಗೂ ಡಿಆರ್‌ಎಫ್‌ಒ ಮಲ್ಲಿಕಾರ್ಜುನ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹೈರಿಗೆ ಗ್ರಾಮದ ಕೆರೆ ಭಾಗದ ಜಮೀನು, ಮುತ್ತುರಾಯ ಹೊಸಹಳ್ಳಿ ಅರಣ್ಯ ಪ್ರದೇಶದ ಸೇರಿದಂತೆ ಸುತ್ತಮುತ್ತಲಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಆತಂಕದಲ್ಲಿ ಜನ
ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಭಾರಿ ಗಾತ್ರದ ಹುಲಿ ಮತ್ತೆ ಯಾವಾಗ ಪ್ರತ್ಯಕ್ಷವಾಗುವುದೋ ಎಂದು ಇಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ತೋಟ ಹಾಗೂ ಜಮೀನಿಗೆ ಕೆಲಸಕ್ಕೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಎಚ್ಚರಿಕೆಗೆ ಸೂಚನೆ
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮಸ್ಥರು ಕೆರೆ ತೋಟ ಜಮೀನುಗಳಿಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದಾರೆ.





