ಡಿಸೆಂಬರ್ ಅಂತ್ಯಕ್ಕೆ 4.80 ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ
ಮೈಸೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2030ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡುವ ಘೋಷಣೆ ಮಾಡಿದ್ದು, ಕರ್ನಾಟಕದಲ್ಲಿ 2025 ಕ್ಕೆ ಕ್ಷಯ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷಯ ನಿಯಂತ್ರಣಕ್ಕೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತೇವೆ. ಬಡತನ, ಅರಿವಿನ ಕೊರತೆಯಿಂದ ಮಕ್ಕಳಲ್ಲಿ ಅನಿಮೀಯ ಕಂಡು ಬರುತ್ತಿದೆ. ಅನೀಮಿಯ ನಿಯಂತ್ರಣಕ್ಕೆ ಆಂದೋಲನ ರೂಪಿಸಿದ್ದೇವೆ. ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಲಿದ್ದೇವೆ. ಶಾಲೆಗಳಲ್ಲಿ ಶಿಬಿರ ಏರ್ಪಡಿಸುತ್ತೇವೆ. ಮಕ್ಕಳ ಸರ್ವಾಂಗೀಣ ಆರೋಗ್ಯ ಬೆಳವಣಿಗೆಗೆ ಕ್ರಮವಹಿಸುತ್ತೇವೆ ಎಂದರು.
ಅರೆ ವೈದ್ಯಕೀಯ ಕೋರ್ಸ್‌ಗಳಾದ ಕ್ರಿಟಿಕಲ್ ಕೇರ್ ಹಾಗೂ ಡಯಾಲಿಸಿಸ್ ಟೆಕ್ನೀಷಿಯನ್ ಕೋರ್ಸ್‌ಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುವುದು. ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗುವುದು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳಿಗೆ ಒತ್ತು ನೀಡಲಾಗುವುದು. ಡಯಾಲಿಸಿಸ್ ಸೇವೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾರಂಭಿಸುವ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಿಸಿದ ಕಾಲೇಜುಗಳ ನಿರ್ದೇಶಕರಿಗೆ ಸೂಚಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಜಾರಿಯಲ್ಲಿರುವ ಟೆಲಿ ಸಮಾಲೋಚನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗಂಭೀರ ಚಿಂತನೆ ಮಾಡಿದ್ದೇವೆ. ವೈದ್ಯಕೀಯ ಕಾಲೇಜುಗಳ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಪ್ರತಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ತಿಳಿಸಲಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಸರಾಸರಿಯಲ್ಲಿ ತಮಿಳುನಾಡು, ಕೇರಳಕ್ಕೆ ಹೋಲಿಸಿದರೆ ಸಮನಾಗಿದ್ದು, ಮತ್ತಷ್ಟು ಉತ್ತಮಪಡಿಸಲು ಹೇಳಲಾಗಿದೆ ಎಂದು ಹೇಳಿದರು.
ವರ್ಷಾಂತ್ಯಕ್ಕೆ ಆರೋಗ್ಯ ಕಾರ್ಡ್: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 4.80 ಕೋಟಿ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ಅನ್ನು ಡಿಸೆಂಬರ್ ವೇಳೆಗೆ ಗ್ರಾಮಾಂತರ ಪ್ರದೇಶದ ಗ್ರಾಮ ಒನ್ ಹಾಗೂ ನಗರ ಪ್ರದೇಶದಲ್ಲಿ ಆಯ್ದ ಕೇಂದ್ರಗಳ ಮೂಲಕ ವಿತರಿಸುವ ಗುರಿ ಹೊಂದಿದ್ದೇವೆ. ಕರ್ನಾಟಕದಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ನಗರಸಭೆ, ನಗರಪಾಲಿಕೆ ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಚಾಲನೆ ನೀಡಿದ ಬಳಿಕ ನವೆಂಬರ್ ತಿಂಗಳಲ್ಲಿ ಎಲ್ಲ ಕಡೆ ಪ್ರಾರಂಭವಾಗಲಿದೆ.
ನಗರ ಆರೋಗ್ಯ ಕೇಂದ್ರಗಳಲ್ಲಿ ೧೨೮ ಮಹಿಳಾ ಸ್ವಸ್ಥ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಸ್ತ್ರೀರೋಗ ತಜ್ಞರು ಒಂದೊಂದು ದಿನ ಹಾಜರಿದ್ದು ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆ ಮಾಡಲಿದ್ದಾರೆ. ಇದರಿಂದಾಗಿ ಮಹಿಳೆಯರು ಹೆರಿಗೆ ಸಮಯದಲ್ಲಿ ಎದುರಿಸುವ ಸಮಸ್ಯೆಗಳನ್ನು ತಪ್ಪಿಸಲು ಅನುಕೂಲವಾಗಲಿದೆ. ಕೆಎಸ್‌ಎಂಸಿ ಮೂಲಕ ಔಷಧಗಳನ್ನು ಇ-ಟೆಂಡರ್ ಮೂಲಕ ನೇರ ಖರೀದಿಗೆ ಅವಕಾಶ ಕೊಡಲಾಗಿದೆ. ಕರ್ನಾಟಕದಲ್ಲಿ ಮೈಸೂರು, ಬೆಳಗಾವಿ ಜಿಲ್ಲೆಗೆ ಎನ್‌ಎಬಿಎಲ್ ಮಾನ್ಯತೆ ದೊರಕಿದೆ ಎಂದರು.
ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಇಂದುಮತಿ, ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಹಾಜರಿದ್ದರು.
ಮೈಸೂರು ಜಿಲ್ಲೆಗೆ ಅಗತ್ಯ ಸೌಕರ್ಯ ನೀಡುತ್ತೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಜಿಲ್ಲಾ ಆಸ್ಪತ್ರೆಗಳಿಗೆ ಹೊಸ ಸ್ಪರ್ಶ ನೀಡುತ್ತೇವೆ. ಮೈಸೂರು ಮೆಡಿಕಲ್ ಕಾಲೇಜು ಶತಮಾನೋತ್ಸವ ಪೂರೈಸಿದ್ದು, ಕಟ್ಟಡ ನವೀಕರಣಕ್ಕೆ ೮೯ ಕೋಟಿ ರೂ. ನೀಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಮೂಲ ಸೌಕರ್ಯ, ಸಿಬ್ಬಂದಿ ನೇಮಕಕ್ಕೂ ಕ್ರಮಕೈಗೊಂಡಿದ್ದೇವೆ. ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಈಗಾಗಲೇ 50 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ.
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ