ಮೈಸೂರು: ಆಷಾಡ ಮಾಸದ ಮೊದಲನೇ ಶುಕ್ರವಾರವಾದ ಇಂದು (ಜುಲೈ.12) ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕಾಗಿ ತಂಡೋಪತಂಡವಾಗಿ ಜನಸಾಗರವೇ ಹರಿದುಬರುತ್ತಿದೆ.
ಚಾಮುಂಡಿ ತಾಯಿಗೆ ಮೊದಲ ಶುಕ್ರವಾರವಾದ ಇಂದು ಸಿಂಹದೇವಿನಿ ಅಲಂಕಾರ ಮಾಡಲಾಗಿದೆ. ರೇಷ್ಮೆ ಸೀರೆ, ವಿವಿಧ ಬಣ್ಣದ ಹೂಗಳಿಂದ ದೇವಿ ಹಾಗೂ ದೇವಾಲಯವನ್ನು ಸಿಂಗಾರಗೊಳಿಸಲಾಗಿದೆ.
ದೇವಿಯ ದರ್ಶನ ಮಾಡಲು ವಿವಿಧ ಜಿಲ್ಲೆಗಳು ಸೇರಿದಂತೆ ಅನೇಕ ಕಡೆಗಳಿಂದ ಜನರು ಬರುತ್ತಿದ್ದಾರೆ. ಇಂದು ಮುಂಜಾನೆ 3.30ರ ಸಮಯದಿಂದಲೇ ದೇಗುಲದಲ್ಲಿ ದೇವಿಗೆ ಪೂಜೆ ಆರಂಭವಾಗಿದೆ. ಸಹಸ್ರ ನಾಮಾರ್ಚನೆ, ರುದ್ರಾಭಿಷೇಕ, ಪಂಚಾಮೃತಾಭಿಷೇಕಗಳನ್ನು ನೆರವೇರಿಸಲಾಗಿದೆ.
ಜನರಿಗೆ ದೇವಿಯ ದರ್ಶನಕ್ಕಾಗಿ ಇಂದು ಬೆಳಿಗ್ಗೆ 6 ಗಂಟೆಯಿಂದ ಮುಕ್ತ ಅವಕಾಶ ನೀಡಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಭಂದ ವಿಧಿಸಲಾಗಿದ್ದು, ಭಕ್ತರು ತಡ ರಾತ್ರಿಯಿಂದಲೇ ನಗರದ ಲಲಿತ್ ಮಹಲ್ ಸಮೀಪದ ಜಾಗದಲ್ಲಿ ತಮ್ಮ ಖಾಸಗಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಸಾರಿಗೆ ಬಸ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.