ಸರಗೂರು: ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಸರಗೂರು ತಾಲ್ಲೂಕಿನ ನುಗು ಜಲಾಶಯ ಭರ್ತಿಯತ್ತ ಸಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.
ಸರಗೂರು ತಾಲ್ಲೂಕಿನ ಮುತ್ತಿಗೆಹುಂಡಿ, ಚಿಕ್ಕಬರಗಿ ಗ್ರಾಮಗಳ ಮೂಲಕ ನುಗು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪರಿಣಾಮ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇನ್ನೂ ಎರಡು ಅಡಿ ಬಾಕಿಯಿರುವಾಗಲೇ ಜಲಾಶಯದಿಂದ ನದಿಗೆ ಎರಡು ಗೇಟ್‌ಗಳ ಮೂಲಕ 3 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ.
ಕಳೆದ ಮೂರು ದಿನಗಳಿಂದ ಕೇರಳ ಮತ್ತು ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನುಗು ಜಲಾಶಯ ಭರ್ತಿಗೆ ಎರಡು ಅಡಿ ಬಾಕಿಯಿದೆ.
ಜಲಾಶಯಕ್ಕೆ 3 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಜಲಾಶಯದ ಭದ್ರತಾ ದೃಷ್ಟಿಯಿಂದ ನೀರಾವರಿ ಇಲಾಖೆ ಅಧಿಕಾರಿಗಳು ಎರಡು ಗೇಟ್‌ಗಳ ಮೂಲಕ 3 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿದ್ದಾರೆ.
ಜಲಾಶಯದ ಮಟ್ಟ 110 ಅಡಿಗಳಾಗಿದ್ದು, 5.44 ಟಿಎಂಸಿ ನೀರು ಶೇಖರಣೆ ಆಗಲಿದೆ. ಇಂದಿನ ಜಲಾಶಯದ ಮಟ್ಟ 108 ಅಡಿ ತಲುಪಿದ್ದು, ಆ ಭಾಗದ ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.