ಎಚ್.ಡಿ.ಕೋಟೆ: ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಕಳೆದ ಮೂರು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ ಈಗ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ನೆರೆಯ ರಾಜ್ಯ ಕೇರಳದ ವಯನಾಡು ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಜಲಾಶಯದ ಇಂದಿನ ಒಳಹರಿವು 20,000 ಕ್ಯೂಸೆಕ್ಸ್‌ಗಳಾಗಿದ್ದು, ಹೊರಹರಿವನ್ನು 25,000 ಕ್ಯೂಸೆಕ್ಸ್‌ಗಳಿಗೆ ಏರಿಕೆ ಮಾಡಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 84 ಅಡಿಗಳಾಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 82 ಅಡಿಗಳಾಗಿದೆ.
ಜಲಾಶಯದಿಂದ ಕಪಿಲಾ ನದಿಗೆ ಹೆಚ್ಚು ಪ್ರಮಾಣದ ನೀರನ್ನು ಬಿಟ್ಟಿದ್ದು, ನದಿ ಪಾತ್ರದ ಜನತೆ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಇನ್ನು ಕಬಿನಿ ಜಲಾಶಯದಿಂದ ನಾಲೆಗೂ ಕೂಡ ನೀರು ಬಿಡಲಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.
ಮಳೆ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯಲಿದ್ದು, ಜನಜೀವನ ಅಸ್ತವ್ಯಸ್ತವಾಗುವ ಎಲ್ಲಾ ಸಂಭವ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನತೆ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದು, ನದಿಯ ಬಳಿ ತೆರಳದಂತೆ ಆದೇಶ ಹೊರಡಿಸಿದ್ದಾರೆ.