ಶ್ರೀಧರ್ ಆರ್ ಭಟ್
ನಂಜನಗೂಡು: ಸರ್ಕಾರಿ ಶಾಲೆಯ ಮಕ್ಕಳ ಜೀವದ ಜೊತೆ ಶಿಕ್ಷಕರೇ ಚೆಲ್ಲಾಟವಾಡುತ್ತಿರುವ ಘಟನೆಯೊಂದು ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಶಾಲೆಯ ಸಂಪ್‌ನಿಂದ ಪುಟ್ಟ ಮಕ್ಕಳು ಬಿಂದಿಗೆಯಿಂದ ನೀರನ್ನು ಹೊರತೆಗೆದು ಬಳಕೆ ಮಾಡುತ್ತಿದ್ದಾರೆ. ಶಾಲೆಯ ಸಿಬ್ಬಂದಿಗಳು ಮಾಡಬೇಕಾದ ಇಂತಹ ಕೆಲಸಗಳನ್ನ ಮಕ್ಕಳ ಕೈಲಿ ಮಾಡಿಸುತ್ತಿದ್ದಾರೆ. ಸುಮಾರು 10 ಅಡಿ ಆಳವಿರುವ ಸಂಪ್‌ನಿಂದ ಮಕ್ಕಳು ಬಿಂದಿಗೆಯಲ್ಲಿ ನೀರು ತೆಗೆಯುತ್ತಿದ್ದಾರೆ. ಆಯ ತಪ್ಪಿದರೂ ಅನಾಹುತ ಆಗುವುದು ಗ್ಯಾರಂಟಿ. ಈ ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇಲ್ಲಿ ಇಂತಹ ಕೆಲಸಗಳ ನಿರ್ವಹಣೆಗೆ ಕೆಲಸಗಾರರನ್ನೇ ನಿಯೋಜಿಸಿಲ್ಲ. ಹೀಗಾಗಿ ಮಕ್ಕಳಿಂದಲೇ ಕೆಲಸ ಮಾಡಿಸುವ ಪರಿಸ್ಥಿತಿ ಎದುರಾಗಿದೆ.
ಇನ್ನು ಇಷ್ಟೆಲ್ಲಾ ನಡೆಯುತ್ತಿದ್ದರೂ ಈ ಬಗ್ಗೆ ಯಾರೂ ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಖ್ಯಶಿಕ್ಷಕಿ ಸೇರಿದಂತೆ 5 ಮಂದಿ ಇಲ್ಲಿ ಶಿಕ್ಷಕಿಯರಿದ್ದು, ಮಕ್ಕಳಿಂದ ಅಪಾಯಕ್ಕೆ ಆಹ್ವಾನ ನೀಡುವ ಕೆಲಸಗಳನ್ನ ಮಾಡಿಸಲು ಅನುಮತಿ ನೀಡಿದವರು ಯಾರು..? ಮುಖ್ಯ ಶಿಕ್ಷಕಿಗೆ ಈ ದೃಶ್ಯಗಳು ಕಂಡು ಬರುತ್ತಿಲ್ಲವೇ..? ಅನಾಹುತ ನಡೆದರೆ ಹೊಣೆ ಯಾರದ್ದು…? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ ಕ್ಷೇತ್ರದಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಂದು, ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.



