ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸಚಿವ ಯತೀಂದ್ರ ಅವರ ಏಕಚಕ್ರಾಧಿಪತ್ಯ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದೇವಪ್ಪ, ತನ್ವೀರ್ ಸೇಠ್ ಹಾಗೂ ವೆಂಕಟೇಶ್ ಅವರಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ತಮ್ಮ ಮಗನಿಗಾಗಿ ಕಾಂಗ್ರೆಸ್ನ ಹಿರಿಯ ಶಾಸಕರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಇದರ ಪರಿಣಾಮವಾಗಿ ಮೈಸೂರು ಜಿಲ್ಲೆಯಲ್ಲಿ ಯತೀಂದ್ರ ಅವರ ಏಕಚಕ್ರಾಧಿಪತ್ಯ ನಡೆಯುತ್ತಿದೆ ಎಂದು ವಿಶ್ವನಾಥ್ ಕಿಡಿಕಾರಿದರು.
ಇದೇ ವೇಳೆ ಅಹಿಂದ ವಿಚಾರದಲ್ಲೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್ ಅವರು, ಸಂಕಷ್ಟ ಬಂದಾಗ ಮಾತ್ರ ಅಹಿಂದ ಜಪ ಮಾಡುತ್ತಾರೆ ಎಂದು ಆರೋಪಿಸಿದರು. ಅಧಿಕಾರದಲ್ಲಿದ್ದಾಗ ಅಹಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಜಾತಿಗಣತಿ ವರದಿಯನ್ನು ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡದ ಅವರು, ಈಗ ಅದನ್ನೇ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಅಹಿಂದ ಸಮಾವೇಶಕ್ಕೆ ಡಾ. ಜಿ. ಪರಮೇಶ್ವರ್ ಅವರಿಂದ ಚಾಲನೆ ಕೊಡಿಸಿರುವುದನ್ನೂ ಪ್ರಶ್ನಿಸಿದ ಅವರು, ಈ ಹಿಂದೆ ಪರಮೇಶ್ವರ್ ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ ಕಾರಣ ಎಂಬ ಆರೋಪವಿತ್ತು ಎಂದು ಹೇಳಿದರು.
ಸರ್ಕಾರಿ ನಿವಾಸ ತೆರವು ವಿಚಾರದಲ್ಲೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಸರ್ಕಾರಿ ನಿವಾಸ ತೆರವು ವಿಚಾರದಲ್ಲೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಡೀ ಘಟನೆಗೆ ಸಿದ್ದರಾಮಯ್ಯ ಅವರೇ ಕಾರಣ. ಭೈರತಿ ಸುರೇಶ್ ಅವರು ಸಿದ್ದರಾಮಯ್ಯ ಅವರ ಶಿಷ್ಯರಾಗಿದ್ದು, ಈ ಎಲ್ಲದರ ಹಿಂದೆ ಪಿತೂರಿ ಇದೆ ಎಂದು ದೂರಿದರು.
ಮಹದೇವಪ್ಪ ಅವರು ದಲಿತ ನಾಯಕರು. ಅವರು ಮನೆಯಲ್ಲಿರುವಾಗಲೇ ನಿವಾಸ ತೆರವು ಮಾಡಿಸಿರುವುದು ದಲಿತರಿಗೆ ಮಾಡಿದ ಅವಮಾನ. ತಮ್ಮ ಅವಧಿ ಮುಗಿದರೂ ಸಿದ್ದರಾಮಯ್ಯ ಸರ್ಕಾರಿ ನಿವಾಸ ಬಿಟ್ಟಿಲ್ಲ. ಆದರೆ ಇತರರು ಮಾತ್ರ ಸರ್ಕಾರಿ ನಿವಾಸ ಖಾಲಿ ಮಾಡಬೇಕು ಎಂಬ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ತಮ್ಮ ಮಗ ಮತ್ತು ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ ಯಾವುದೇ ಹಂತಕ್ಕೂ ಇಳಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.




