Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಎಚ್.ಡಿ.ಕೋಟೆ: ದಮ್ಮನಕಟ್ಟೆಯಲ್ಲಿ ಅರಣ್ಯ ಕಾಡ್ಗಿಚ್ಚು ತಡೆ ಕಾರ್ಯಗಾರ

ಅಂತರಸಂತೆ: ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ಇಲಾಖೆಯವರು ಒಗ್ಗೂಡಿ ಈ ಬೇಸಿಗೆಯ ಅವಧಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಿಸಲು ನಮ್ಮ ಶಕ್ತಿ ಮೀರಿ ಶ್ರಮಿಸಬೇಕು ಎಂದು ಸಹಾಯಕ ಅಗ್ನಿ ಶಾಮಕ ಸೋಮಣ್ಣ ತಿಳಿಸಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆಯ ಕಾಕನಕೋಟೆ ಸಫಾರಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ನಾಗರಹೊಳೆಯ ಅಂತರಸಂತೆ, ಮೇಟಿಕುಪ್ಪೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಸಿಬ್ಬಂದಿಗಳಿಗೆ ’ಅರಣ್ಯ ಕಾಡ್ಗಿಚ್ಚು ತಡೆ ಕಾರ್ಯಗಾರ’ದಲ್ಲಿ ಬೆಂಕಿ ನಂದಿಸುವ ಬಗ್ಗೆ ತರಬೇತಿ ನೀಡಿ ಮಾತನಾಡಿದ ಅವರು, ಕಾಡು ನಮ್ಮ ದೇಶದ ಅಮೂಲ್ಯ ಸಂಪತ್ತು. ಈ ಸಂಪತ್ತನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕಾಗಿ ನಾವು ಸ್ಥಳೀಯರ ಸಹಕಾರವನ್ನೂ ಪಡೆದು ಕಾಡನ್ನು ಕಾಡ್ಗಿಚ್ಚಿನಿಂದ ಕಾಪಾಡಲು ಹಗಲು ರಾತ್ರಿ ಎನ್ನದೆ ಶ್ರಮಿಸಬೇಕು ಎಂದರು.

ಬಳಿಕ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು ಅವರು, ಕಾಡಿಗೆ ಬೆಂಕಿ ಬಿದ್ದರೆ ಅಪಾರ ಪ್ರಮಾಣದ ಜೀವ ಪರಿಸರ ನಾಶವಾಗುತ್ತದೆ. ಆದ್ದರಿಂದ ಬೇಸಿಗೆಯ ೨-೩ ತಿಂಗಳುಗಳ ಕಾಲ ನಾವು ಕಾಡಿನ ರಕ್ಷಣೆಗಾಗಿ ಶ್ರಮಿಸಬೇಕು. ನಮ್ಮೊಡನೆ ಅಗ್ನಿ ಶಾಮಕ ಇಲಾಖೆಯವರೂ ಕೈಜೋಡಿಸುತ್ತಿರುವುದು ನಮ್ಮ ಬಲವನ್ನು ಹೆಚ್ಚಿಸಿದೆ. ಅರಿವಿನ ಕೊರತೆಯಿಂದಾಗಿಯೂ ಕೆಲವು ಬಾರಿ ಕಾಡಿಗೆ ಬೆಂಕಿ ಬೀಳುವ ಅಪಾಯವಿರುತ್ತದೆ. ರೈತರು ಜಮೀನುಗಳಲ್ಲಿ ಹಾಕುವ ಬೆಂಕಿ, ಬೀಡಿ ಸಿಗರೇಟಿನ ಬೆಂಕಿ ಕಿಡಿಗಳಿಂದ ಕಾಡ್ಗಿಚ್ಚು ಆಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಾವು ಕಾಡಂಚಿನ ಗ್ರಾಮಗಳಲ್ಲಿ ಕಾಡ್ಗಿಚ್ಚಿನ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಬಳಿಕ ಬೆಂಕಿ ನಂದಿಸುವ ಸಾಧನ ಸಲಕರಣಗಳನ್ನು ಹೇಗೆ ಸಿದ್ಧವಾಗಿಟ್ಟುಕೊಳ್ಳಬೇಕು, ಬೆಂಕಿಬಿದ್ದ ಸ್ಥಳಕ್ಕೆ ಅವುಗಳನ್ನು ಹೇಗೆ ಕೊಂಡ್ಯೊಯ್ಯಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಗ್ನಿ ಶಾಮಕ ಇಲಾಖೆಯ ಸಾಧನೆಗಳನ್ನು ಬಳಸುವುದರ ಬಗ್ಗೆ ತರಬೇತಿ ನೀಡಿದರು.

ಇದೇ ವೇಳೆ ವಲಯ ಅರಣ್ಯಾಧಿಕಾರಿಗಳಾದ ಡಿ.ಮಧು, ರಶ್ಮಿ, ಉಪವಲಯ ಅರಣ್ಯಾಧಿಕಾರಿಗಳಾದ ಎಸ್.ಮಂಜುನಾಥ ಆರಾಧ್ಯ, ಎನ್.ಎಲ್.ಚೇತನ್ ಸೇರಿದಂತೆ ಅಂತರಸಂತೆ, ಡಿ.ಬಿ.ಕುಪ್ಪೆ, ಮತ್ತು ಮೇಟಿಕುಪ್ಪೆ ವನ್ಯಜೀವಿ ವಲಯದ ಸಿಬ್ಬಂದಿ ಹಾಜರಿದ್ದರು.

Tags: