Mysore
20
overcast clouds
Light
Dark

ಗುರು ಪೌರ್ಣಿಮೆ ಪ್ರಯುಕ್ತ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ನಂಜನಗೂಡು: ಪುರಾಣ ಪ್ರಸಿದ್ಧ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಗುರು ಪೌರ್ಣಿಮೆ ಪ್ರಯುಕ್ತ
ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಗುರು ಪೌರ್ಣಿಮೆ ಪ್ರಯುಕ್ತ ಶ್ರೀಕಂಠೇಶ್ವರಸ್ವಾಮಿಗೆ ಚಿನ್ನದ ಕೊಳಗ ತೊಡಿಸಿ, ನಾನಾ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಇಂದು ಶ್ರೀಕಂಠೇಶ್ವರನಿಗೆ ಪಂಚತೀರ್ಥಗಳ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಕಲ್ಲು ಸಕ್ಕರೆ ಅಭಿಷೇಕ ಸೇರಿದಂತೆ ಅನೇಕ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ದೇವರಿಗೆ ಮಹಾಮಂಗಳಾರತಿಯನ್ನು ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಇನ್ನೂ ದೇವಾಲಯಕ್ಕೆ ಬಂದ ಭಕ್ತರು ಕಪಿಲಾ ನದಿ ಬಳಿ ತೆರಳದೇ, ಸಲೀಸಾಗಿ ದೇವಸ್ಥಾನಕ್ಕೆ ಹೋಗಿ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿದರು. ಗುರುಪೌರ್ಣಿಮೆ ಪ್ರಯುಕ್ತ ಇಂದು ಸಾವಿರಾರು ಭಕ್ತರು ಶ್ರೀಕಂಠೇಶ್ವರನ ದರ್ಶನ ಪಡೆದು ಪುನೀತರಾದರು.

ದೇವಾಲಯದ ದಾಸೋಹ ಭವನದಲ್ಲಿ ಹುಣ್ಣಿಮೆ ಅಂಗವಾಗಿ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.