ಮೈಸೂರು: ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ದಿಕ್ಕು ತಪ್ಪಿದ್ದು, ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಗ್ಯಾರೆಂಟಿ ಯೋಜನೆಗಳು, ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಿರುವ ಹಣದ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯ ರಿಗೆ ಏನು ಬೇಕೋ ಅದನ್ನು ಕೊಡುವುದನ್ನು ಬಿಟ್ಟು ಯಾವ್ಯಾವುದೋ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಇನ್ನೊಂದು ಕಡೆಯಿಂದ ಸುಲಿಗೆ ಮಾಡುತ್ತಿದೆ. ಅಲ್ಲದೆ ಸರ್ಕಾರವು ಸಾಲದ ಹೊರೆಯಿಂದ ತತ್ತರಿಸುತ್ತಿದೆ ಎಂದು ದೂರಿದರು. ಸರ್ಕಾರದ ವತಿಯಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲುಹೊರಗುತ್ತಿಗೆ ಆಧಾರದ ಮೇಲೆ ಲಕ್ಷಾಂತರ ಜನರಿಂದ ಕೆಲಸ ಮಾಡಿಸುತ್ತಿದ್ದಾರೆ.
ಇಂತಹ ಗುತ್ತಿಗೆಗಳ ಟೆಂಡರ್ ಅನ್ನು ಸಚಿವರು, ಇತರೆ ರಾಜಕಾರಣಿಗಳ ಸಂಬಂಧಿ ಕರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಾರ್ಮಿಕ ಕಾನೂನು ಪ್ರಕಾರ ಯಾವುದೇ ಹೊರ ಗುತ್ತಿಗೆಯಡಿಯಲ್ಲಿಕಾರ್ಯ ನಿರ್ವಹಿಸುವ ವರಿಗೆ ಕನಿಷ್ಠ 18 ಸಾವಿರ ರೂ. ವೇತನ ಕೊಡ ಬೇಕೆಂಬ ನಿಯಮವಿದೆ. ಆದರೆ 12 ಸಾವಿರ ರೂ. ವೇತನ ಕೊಟ್ಟು ಉಳಿದ 6 ಸಾವಿರ ರೂ. ಗುತ್ತಿಗೆದಾರನ ಜೇಬಿಗೆ ಹೋಗುತ್ತಿದೆ ಎಂದು ದೂರಿದರು.
ಇನ್ನು ನಟ ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ 2014 ರಲ್ಲಿ ನಟ ದರ್ಶನ್ ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಆಗ ಅವರ ತಾಯಿ ಕಾಂಗ್ರೆಸ್‌ನಲ್ಲಿದ್ದರು. ನಾನೇಕೆ ದರ್ಶನ್ ವಿರುದ್ಧವಾಗಿ ಸಾಕ್ಷಿ ಹೇಳಬೇಕು. ನಮ್ಮ ನಟರೆಲ್ಲರಿಗೂ ಮಾದರಿಯಾಗಬೇಕು ಎಂದು ಉತ್ತರಿಸಿದರು.





