ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನಲ್ಲಿ ಐತಿಹಾಸಿಕ ಜಾತ್ರಾ ಮಹೋತ್ಸವ ಜನವರಿ.31 ರಿಂದ ಫೆಬ್ರವರಿ 16ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು(ಜನವರಿ.29) ಮುಡುಕುತೊರೆ ಜಾತ್ರಾ ಮಹೋತ್ಸವದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜನವರಿ 31 ರಿಂದ ಫೆಬ್ರವರಿ 16ರವರೆಗೆ ಮುಡುಕುತೊರೆ ಜಾತ್ರಾ ಮಹೋತ್ಸವ ನಡೆಯಲಿದೆ. ಫೆಬ್ರವರಿ 7 ರಂದು ರಥೋತ್ಸವ ಮತ್ತು ಫೆಬ್ರವರಿ 10 ರಂದು ತೆಪ್ಪೋತ್ಸವ ಸಮಾರಂಭ ಜರುಗಲಿದೆ. ಈ ಜಾತ್ರೆಯೂ ಒಟ್ಟು 17 ದಿನಗಳ ಕಾಲ ನಡೆಯಲಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ರೀತಿಯ ತೊಂದರೆ ಆಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಜಾತ್ರಾ ಮಹೋತ್ಸವದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಂಬುಲೆನ್ಸ್ ವ್ಯವಸ್ಥೆ ಮತ್ತು ವೈದ್ಯರುಗಳ ತಂಡವನ್ನು ನೇಮಿಸಬೇಕು. ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ದೀಪಾಲಂಕಾರ ಮಾಡಬೇಕು. ಅಲ್ಲದೇ ಜಾತ್ರೆಯಲ್ಲಿ ತಾತ್ಕಾಲಿಕ ಶೌಚಾಲಯ, ಮೊಬೈಲ್ ಶೌಚಾಲಯ ಹಾಗೂ ಬಟ್ಟೆ ಬದಲಿಸುವ ಕೊಠಡಿ ನಿರ್ಮಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಇನ್ನೂ ಪೊಲೀಸ್ ಇಲಾಖೆ ವತಿಯಿಂದ ಬ್ಯಾರಿಕೇಡ್, ಧ್ವನಿ ವರ್ಧಕ , ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಜಾತ್ರಾ ಮಾಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಜಾತ್ರಾ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಬೇಕು. ನೈರ್ಮಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಈ ಇಲಾಖೆಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.