Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಸರ್ಕಾರಿ ಗೌರವದೊಂದಿಗೆ ʼಪಂಡಿತʼರ ಅಂತ್ಯಕ್ರಿಯೆ; ಅಭಿಮಾನಿಗಳಿಂದ ಕಂಬನಿಯ ವಿದಾಯ

ಮೈಸೂರು: ಸಂಗೀತ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರ ಅಂತ್ಯಕ್ರಿಯೆಯು ಇಂದು(ಜೂ.12)ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾಗಾರದಲ್ಲಿ ಅಗ್ನಿಸ್ಪರ್ಶ ಮಾಡಿ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಶಿಷ್ಟಾಚಾರದನ್ವಯ ತಾರಾನಾಥ್ ಅವರ ಪ್ರಾರ್ಥಿವ ಶರೀರಕ್ಕೆ ನಾಲ್ವರು ಪೊಲೀಸರು ಪೆರೇಡ್ ಕಮಾಂಡರ್ ಸಮ್ಮುಖದಲ್ಲಿ ರಾಷ್ಟ್ರಧ್ವಜವನ್ನಿರಿಸಿದರು. ಶಸ್ತ್ರಸಜ್ಜಿತ ಪೊಲೀಸರು ರಾಷ್ಟ್ರಗೀತೆಯನ್ನು ನುಡಿಸುತ್ತಿದ್ದಂತೆ ಮೂರು ಸುತ್ತಿನ ಕುಶಾಲತೋಪು ಹಾರಿಸಲಾಯಿತು. ವಾಲಿ ಫೈರಿಂಗ್ ಮಾಡಿದ ನಂತರ ಬಂದೂಕನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ತಿರುಗಿಸಿ ಒಂದು ನಿಮಿಷ ಮೌನ ವ್ರತ ಆಚರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.

ನಂತರ, ಗಣ್ಯರ ಅನುಮತಿ ಮೇರೆಗೆ ರಾಷ್ಟ್ರಧ್ವಜವನ್ನು ಪಡೆದುಕೊಂಡು ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೆ ಒಪ್ಪಿಸಲಾಯಿತು. ಇದಾದ ಬಳಿಕ ಕುಟುಂಬದವರು ಚಿತಾಗಾರದಲ್ಲಿ ಇರಿಸಿ ಅಗ್ನಿಸ್ಪರ್ಶ ಮಾಡಲಾಯಿತು. ಈ ವೇಳೆ ಕುಟುಂಬದವರು, ಕಲಾಸಕ್ತರು, ಕಂಬನಿ ಮಿಡಿದು ಕಣ್ಣೀರಿಟ್ಟರು.

ಸರೋದ್‌ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರು‌  ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಗುಣಮುಖರಾಗದೆ ಮಂಗಳವಾರ(ಜೂ.11)  ಕೊನೆಯುಸಿರೆಳೆದಿದ್ದರು. ನಂತರ, ಕುವೆಂಪುನಗರದಲ್ಲಿರುವ ಪಂಚಮಂತ್ರ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಪ್ರಾರ್ಥಿವ ಶರೀರವನ್ನು ತಂದಿರಿಸಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಜನಪ್ರತಿನಿಧಿಗಳು, ಗಣ್ಯರು, ಸಾಹಿತಿಗಳು, ಕವಿಗಳು, ಪ್ರಗತಿಪರರು, ಸಂಗೀತಾಸಕ್ತರು ಸೇರಿದಂತೆ ಸಾವಿರಾರು ಜನರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದರು.

ಅಂತ್ಯಕ್ರಿಯೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.  ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ  ಅವರು ಗೌರವ ವಂದನೆ ಸಲ್ಲಿಸಿದರು.

Tags:
error: Content is protected !!