ಮೈಸೂರು : OTS ಸಾಲ ತಿರುವಳಿ ಮೇಳ ನಡೆಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಮೈಸೂರು ಜಿಲ್ಲಾ ಘಟಕದಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೈಸೂರಿನ ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಎಲ್ಲಾ ಬ್ಯಾಂಕುಗಳು ರೈತರ ಕೃಷಿ ಸಾಲ OTS ಮೂಲಕ ತಿರುವಳಿ ಮಾಡುತ್ತಿದ್ದರು ಕಾವೇರಿ ಗ್ರಾಮೀಣ ಬ್ಯಾಂಕ್ ಮಾತ್ರ ಸರ್ಕಾರದ ಆದೇಶ ಉಲ್ಲಂಘಿಸಿ OTS ಸಾಲ ತಿರುವಳಿ ಮೇಳ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಳಿಕ ಪ್ರತಿಭಟನಾಕಾರರು ಮಾತನಾಡಿ, ಬರಗಾಲದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಾಲ ಮಾಡಿ ತೀರಿಸಲು ಸಾಧ್ಯವಾಗದೆ ಇರುವುದರಿಂದ ಮತ್ತೆ ಕೃಷಿ ಚಟುವಟಿಕೆ ನಡೆಸಲು ಅನುಕೂಲ ಆಗುವಂತೆ ರಾಜ್ಯ ಮಾರ್ಗದರ್ಶಿ ಬ್ಯಾಂಕ್ ಆದೇಶ ಹೊರಡಿಸಿತ್ತು. ಹೀಗಾಗಿ ಬ್ಯಾಂಕ್ ಶಾಖೆಗಳಲ್ಲಿ OTS ಸಾಲ ತಿರುವಳಿ ಮೇಳ ಹೆಚ್ಚು ಪ್ರಚಾರ ನೀಡಿ ನಡೆಸುವಂತೆ ಹಾಗೂ ಇದರ ಸದುಪಯೋಗ ರೈತರು ಪಡೆದುಕೊಳ್ಳುವಂತೆ ನಾಮಫಲಕ ಅನಾವರಣ ಮಾಡಿ ರೈತರಿಗೆ ಜಾಗೃತಿ ಮೂಡಿಸಿ ನೆರವಾಗಬೇಕು. ಆದರೆ ಬ್ಯಾಂಕ್ ಶಾಖೆ ಗಳಲ್ಲಿ ಪ್ರಚಾರ ಮಾಡದೆ ಇರುವುದು ಮುಗ್ಧ ರೈತರು ಈ ಅವಕಾಶದಿಂದ ವಂಚಿತರಾಗಿದ್ದಾರೆ, ಕಳೆದ ಎರಡು ತಿಂಗಳ ಹಿಂದೆ ಬ್ಯಾಂಕ್ ನ ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಹೋರಾಟ ನಡೆಸಿದ ಪರಿಣಾಮ ಈ ಆದೇಶ ಹೊರಡಿಸಲಾಗಿದೆ ಆದರೆ ಕೆಲವು ಶಾಖೆಗಳು ಇದನ್ನು ಮರೆಮಾಚಿ ರೈತರಿಗೆ ವಂಚನೆ ಮಾಡುತ್ತಿವೆ. ಹೀಗಾಗಿ ರೈತರಿಗೆ ವಂಚನೆ ಮಾಡದೆ ಅನುಕೂಲ ಮಾಡಿ ಕೊಡಬೇಕೆಂದು ಹಾಗೂ ಒ ಟಿ ಎಸ್ ಮಾಡಿದ ರೈತರಿಗೆ ಮತ್ತೆ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯಾದವ ಮೂರ್ತಿ ಹಾಗೂ ಸೀನಿಯರ್ ಮ್ಯಾನೇಜರ್ ಬಾನು ಪ್ರಕಾಶ್ ಪ್ರತಿಭಟನಾ ನಿರತ ರೈತರ ಮನವಲಿಸಿ ಬ್ಯಾಂಕ್ ಗಳಲ್ಲಿ ನಾಮಫಲಕ ಅನಾವರಣ ಮಾಡಿಸಿ ರೈತರಿಗೆ ಜಾಗೃತಿ ಮೂಡಿಸಲು ಸೂಚನೆ ನೀಡುತ್ತೇವೆ ಎಂದು ಭರವಸೆ ನೀಡಿದ ನಂತರ ರೈತರು ತಮ್ಮ ಪ್ರತಿಭಟನೆ ಕೈ ಬಿಟ್ಟರು.