ಮೊನ್ನೆಯಷ್ಟೇ ದನ ಮೇಯಿಸಲೆಂದು ತೆರಳಿದ್ದ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ನರಭಕ್ಷಕ ಹುಲಿಯನ್ನು ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪ ಬಂಡೀಪುರ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಇದೇ ಹುಲಿ ಹಸುವೊಂದನ್ನೂ ಸಹ ಕೊಂದಿತ್ತು.
ಮಧ್ಯರಾತ್ರಿ 1.45ರ ವೇಳೆಗೆ ಹಸುವನ್ನು ಕೊಂದಿದ್ದ ಜಾಗಕ್ಕೆ ಮತ್ತೆ ಬಂದಿದ್ದ ಈ ಹುಲಿಯನ್ನು ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಹಿಡಿಯಲಾಗಿದೆ. ಸೆರೆಸಿಕ್ಕ ಹುಲಿ 10 ವರ್ಷದ ಗಂಡು ಹುಲಿಯಾಗಿದ್ದು ಸದ್ಯ ಈ ಹುಲಿಯನ್ನು ಮೈಸೂರಿನ ಮೃಗಾಯಲದಲ್ಲಿ ಬಿಡಲಾಗಿದೆ.
ರತ್ನಮ್ಮ ಎಂಬ ದನಗಾಹಿಯನ್ನು ಕೊಂದ ಬಳಿಕ ಈ ಹುಲಿಯನ್ನು ಹಿಡಿಯಬೇಕೆಂದು ಜನರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಸತತವಾಗಿ ಮೂರು ದಿನಗಳ ಪ್ರಯತ್ನದ ಬಳಿಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.





