ಮಲ್ಕುಂಡಿ : ನಂಜನಗೂಡು ತಾಲ್ಲೂಕಿನ ತರಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವ ಹಸಿರು ಸೇನೆಯ ರೈತ ಸಂಘದ ಮುಖಂಡರು ಡೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಕೆ.ಟಿ.ನಟರಾಜ್ ಮಾತನಾಡಿ, ಡೇರಿ ಆಡಳಿತ ಮಂಡಳಿಯು ಹಾಲು ಉತ್ಪಾದಕರಿಗೆ ಯಾವುದೇ ಬೋನಸ್ ನೀಡದೆ ಸುಮಾರು 2 ಕೋಟಿ ರೂ. ಲೂಟಿ ಮಾಡಿದೆ. 20 ವರ್ಷಗಳಿಂದ ಯಾವುದೇ ಲೆಕ್ಕ ಪತ್ರಗಳನ್ನು ನೀಡದೆ ಹಾಲು ಉತ್ಪಾದಕರಿಗೆ ವಂಚನೆ ಮಾಡಿದೆ. ಈ ಬಗ್ಗೆ ತನಿಖೆ ನಡೆಸಲು ಒಕ್ಕೂಟಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈಗಲಾದರೂ ಒಕ್ಕೂಟದ ಅಧಿಕಾರಿಗಳು ಇತ್ತ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾಮೂಹಿಕ ನಾಯಕತ್ವದ ಹಸಿರು ಸೇನೆಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ, ಗ್ರಾಮದಲ್ಲಿ ರೈತರು ಕಷ್ಟ ಪಟ್ಟು ಹಸುಗಳನ್ನು ಸಾಕಿ ಡೇರಿಗೆ ಹಾಲು ಹಾಕುತ್ತಿದ್ದು, ಅವರ ಹಣ ಲೂಟಿ ಮಾಡುವುದು ಸರಿಯಲ್ಲ. ಆಡಳಿತ ಮಂಡಳಿಯನ್ನು ತಕ್ಷಣ ವಜಾಗೊಳಿಸಿ, ಸೂಕ್ತ ಕ್ರಮ ಕೈ ಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸವರಾಜ್, ಶಿವಪ್ಪ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ, ಬಸವರಾಜಪ್ಪ, ಚನ್ನಪ್ಪಾಜಿನಾಯಕ, ಶಿವಕುಮಾರ್,ಬಸವರಾಜ್, ಗಿರೀಶ್, ಮಹೇಶ್, ಹರೀಶ್, ಕುಮಾರ್, ಚಾಮರಾಜು, ನಂಜುಂಡ, ನಾಗರಾಜು, ಹಲವಾರು ರೈತರು ಹಾಜರಿದ್ದರು.





