ರಾವಂದೂರು: ರೈತರೊಬ್ಬರು ತಾವು ಬೆಳೆದ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಕೊತ್ತವಳ್ಳಿ ಕೊಪ್ಪಲು ಗ್ರಾಮದ ಸ್ವಾಮಿ ಗೌಡ (51) ಆತ್ಮಹತ್ಯೆ ಮಾಡಿಕೊಂಡವರು. ತಂಬಾಕು ನಾಟಿ ಮಾಡಿದ್ದು, ಆ ತಂಬಾಕು ಸಸಿಗಳಿಗೆ ರೋಗ ಹರಡಿದ ಹಿನ್ನೆಲೆಯಲ್ಲಿ ನಷ್ಟವಾಗಿ ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ಇವರು 20 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಮಾಡಿದ್ದು, ಕಿತ್ತೂರಿನ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 5 ಲಕ್ಷ ರೂ. ಹಾಗೂ ಟ್ರಾಕ್ಟರ್ ಮೇಲೆ 5 ಲಕ್ಷ ರೂ. ಹಾಗೂ ಇನ್ನಿತರ ಕಡೆ ಕೈ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




