Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಕೆಂಪೇಗೌಡರ ಆಶಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ಜಿ.ಟಿ.ದೇವೆಗೌಡ

ಮೈಸೂರು: ನಾಡನ್ನು ಕಟ್ಟುವ ಕಾರ್ಯದಲ್ಲಿ ಕೆಂಪೇಗೌಡರ ಪಾತ್ರ ಮಹತ್ವವಾದದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ಪೀಳಿಗೆಯವರಿಗೂ ಅವರ ಕೊಡುಗೆ ಅಪಾರ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಹೇಳಿದರು.

ಇಂದು(ಜೂ. 27) ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ವರ್ಷವು ಕೆಂಪೇಗೌಡ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಿ ಸಮಾಜದ ಎಲ್ಲಾ ಜನಸಾಮಾನ್ಯರಿಗೂ ಕೆಂಪೇಗೌಡರ ಕೊಡುಗೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ. ಆದರೇ ಇದು ಕೇವಲ ಜಯಂತಿಗೆ ಸೀಮಿತವಾಗದೆ ದಿನನಿತ್ಯ ಅವರ ಬಗ್ಗೆ ಅರಿವು ಮೂಡಿಸಿ ಅವರ ಆಶಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದರು.

ಕೆಂಪೇಗೌಡ ಅವರು 16 ನೇ ಶತಮಾನದಲ್ಲಿಯೇ ಹಲವು ತಜ್ಞರೊಂದಿಗೆ ಚರ್ಚಿಸಿ ಬೆಂಗಳೂರಿನ ನಿರ್ಮಾಣದ ಕನಸನ್ನು ಕಂಡು ಅದನ್ನು ನನಸು ಮಾಡಿ ಬೆಂಗಳೂರಿನ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅನೇಕ ಪೇಟೆಗಳು, ಮಾರುಕಟ್ಟೆ, ದೇವಾಲಯಗಳು, ಕೆರೆಗಳನ್ನು ನಿರ್ಮಿಸಿ ಬೆಂಗಳೂರಿಗೆ ಹೊಸ ಚೈತನ್ಯ ತುಂಬಿದರು. ಇಂದು ಬೆಂಗಳೂರು ಪ್ರಪಂಚಕ್ಕೆ ಪರಿಚಿತವಾಗಲು ಮುಖ್ಯ ಕಾರಣವೇ ಕೆಂಪೇಗೌಡರು. ಬೆಂಗಳೂರಿನ ಅಂತರಾಷ್ಟೀಯ ವಿಮಾನ ನಿಲ್ದಾಣ ಹಾಗೂ ಪ್ರತಿಮೆಯೇ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ತಿಳಿಸುತ್ತವೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಪ್ರತಿಯೊಂದು ಜಯಂತಿಯ ಆಚರಣೆಗಳನ್ನು ಸಂಕೇತಿಕವಾಗಿ ಆಚರಣೆ ಮಾಡುವುದರ ಜೊತೆಗೆ ಅವರ ಚಿಂತನೆಗಳನ್ನು, ಆದರ್ಶಗಳನ್ನು, ಕೊಡುಗೆಗಳನ್ನು ಬಳಸಿ ಉಳಿಸಿಕೊಂಡು ಹೋಗಬೇಕು ಎಂದರು.

ಯಾವುದೇ ತಂತ್ರಜ್ಞಾನದ ಬಳಕೆ ಇಲ್ಲದ 16 ನೇ ಶತಮಾನದಲ್ಲಿಯೇ ವೈಜ್ಞಾನಿಕವಾಗಿ ನಗರವನ್ನು ಕಟ್ಟುವಲ್ಲಿ ಸಫಲರಾದರು ಕೆಂಪೇಗೌಡರು. ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತವಾಗದೆ ಇಡೀ ಸಮಾಜಕ್ಕೆ ಕೊಡುಗೆ ಕೊಟ್ಟಂತಹ ಮಹಾನ್ ವೀರ ಕೆಂಪೇಗೌಡ. ಇವರು ಕೊಟ್ಟಂತಹ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವಂತಹ ಪ್ರಯತ್ನ ಮಾಡಬೇಕು ಎಂದರು.

ವಿಧಾನ ಪರಿಷತ್‌ನ ಶಾಸಕರಾದ ಸಿ.ಎನ್.ಮಂಜೇಗೌಡ ಮಾತನಾಡಿ, ಕೆಂಪೇಗೌಡರು ಮಾಡಿದ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅದನ್ನು ಉಳಿಸಿಕೊಂಡು ಹೋಗಬೇಕು. ರಾಜ್ಯದ ರಕ್ಷಣೆಗಾಗಿ ಅವರು ಮಾಡಿದ ತ್ಯಾಗ, ಬಲಿದಾನವನ್ನು ನಾವು ನೆನೆಯಬೇಕು. ಅವರು ಯಾವುದೇ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ ಎಂದರು.

ಮೈಸೂರು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರು ಮಾತನಾಡಿ, ಸಮಾಜದ ಅಭಿವೃದ್ಧಿಯ ಹರಿಕಾರರಾದ ಕೆಂಪೇಗೌಡರ ವಿಚಾರ ಲಹರಿ, ಕೊಡುಗೆಗಳು ಅಪಾರ. ಮನುಷ್ಯ ಕುಲ ತಾನೊಂದೇ ವಲಂ ಎಂಬಂತೆ ಅವರು ಮಾಡಿದ ಕೆಲಸಗಳನ್ನು ನಮ್ಮ ಮಕ್ಕಳಿಗೆ ತಿಳಿಸಿ ಕೊಡಬೇಕು ಎಂದರು.

ಜಾತಿ, ಧರ್ಮ ಮೆಟ್ಟಿ ನಿಂತಿದ್ದ ಕೆಂಪೇಗೌಡರು

ನಾವು ಪ್ರತಿವರ್ಷ ವಿವಿಧ ಜಯಂತಿಗಳನ್ನು ಆಚರಿಸುತ್ತಾ ಬಂದಿದ್ದೇವೆ. ಯಾವುದೇ ಮಹಾವೀರರ ಜಯಂತಿಗಳು ಸಹ ಹುಟ್ಟಿನಿಂದಲೇ ಅವರ ಜಾತಿಗೆ ಸೇರಿರಬಹುದು ಆದರೆ ಕೆಂಪೇಗೌಡರು ಜಾತಿ, ಧರ್ಮ ಮೀರಿ ಸಮಾಜಕ್ಕೆ ಅವರು ಕೊಟ್ಟಂತಹ ಕೊಡುಗೆ ಮಹತ್ವವಾದದ್ದು ಎಂದು ಮುಖ್ಯ ಭಾಷಣಕಾರ, ವಿಶ್ರಾಂತ ಪ್ರಾಧ್ಯಾಪಕರಾದ ಡಿ.ಕೆ ರಾಜೇಂದ್ರ ಹೇಳಿದರು.

ಕೆoಪೇಗೌಡರು ನಾಡನ್ನು ಕಟ್ಟಿದ ಶಾಶ್ವತ ಕೆಲಸದಿಂದ ಸಮಾಜಕ್ಕೆ ಚಿರಪರಿಚಿತರಾಗಿದ್ದಾರೆ. ಜಾತಿ, ಮತ ಧರ್ಮಗಳನ್ನೂ ಮೆಟ್ಟಿ ಸಾಮಾನ್ಯ ರಾಜನಾಗಿ 500 ವರ್ಷಗಳು ಕಳೆದಿದ್ದರೂ ಸಹ ಇಂದಿಗೂ ಅವರ ಕೊಡುಗೆ ಜೀವಂತವಾಗಿದೆ.

ಕೆoಪೇಗೌಡರು ಒಬ್ಬ ಮಹಾವೀರ, ಸಾಹಸಿ, ಉತ್ತಮ ಆಡಳಿತಗಾರ, ಜನಾನುರಾಗಿ, ದೈವಭಕ್ತ, ಯುದ್ಧ ಸಾಹಸಿಯಾಗಿದ್ದು, ಬೆಂಗಳೂರಿನ ನಿರ್ಮಾತೃರಾಗುವಲ್ಲಿ ಕಂಡ ಕನಸ್ಸನ್ನೂ ನನಸು ಮಾಡಿದರು. ಜೊತೆಗೆ ನವದುರ್ಗಗಳನ್ನು ನಿರ್ಮಿಸಿದರು. ಅಂದು ಅವರು ಮಾಡಿದ ಕೆಲಸ ಇಂದು ವಿಶ್ವ ಪ್ರಸಿದ್ಧ ಮಹಾನಗರವಾಗಿ ಬೆಂಗಳೂರು ಬೆಳೆದಿದೆ. ಬೆಂಗಳೂರಿನ ಸುತ್ತ-ಮುತ್ತ ಅವರು ನಿರ್ಮಿಸಿರುವ ನೂರಾರು ಕೆರೆ, ಕಾಲುವೆಗಳು ಇಂದಿಗೂ ಜೀವಂತವಾಗಿರುವುದನ್ನು ಕಾಣಬಹುದು ಎಂದರು.

ವೃತ್ತಿಗೆ ಅನುಗುಣವಾಗಿ ಅನೇಕ ಪೇಟೆಗಳು, ವ್ಯಾಪಾರ ಕೇಂದ್ರಗಳನ್ನು ತೆರೆದು ನಗರ ಯೋಜನೆಗೆ ಅಡಿಪಾಯ ಹಾಕುವುದರೊಂದಿಗೆ ಅನೇಕ ಶಿವ ದೇವಾಲಯಗಳನ್ನು ನಿರ್ಮಿಸಿದರು. ಬೆಂಗಳೂರಿನ ಕಡಲೆ ಕಾಯಿಯ ಪರಿಷೆಯು ಅವರ ನೆನಪಿನಲ್ಲೇ ನಡೆಯುತ್ತಿದೆ. ರಾಜ್ಯಕ್ಕೆ ಶತ್ರುಗಳು ಪ್ರವೇಶ ಮಾಡದಂತೆ ಅನೇಕ ದುರ್ಗಗಳನ್ನು ನಿರ್ಮಿಸಿ ಪ್ರಜೆಗಳ ಹಿತರಕ್ಷಣೆಗೆ ಮುಂದಾದರು. ಅವರು ಮಾಡಿದ ಕೆಲಸಗಳು ಇಂದಿಗೂ ನಮ್ಮೊಂದಿಗಿವೆ ಇಂತಹ ವ್ಯಕ್ತಿಯ ಸ್ಮರಣೆ ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ವಿಧಾನ ಪರಿಷತ್ತಿನ ಶಾಸಕರಾದ ಕೆ.ವಿವೇಕಾನಂದ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

Tags: