ಮೈಸೂರು: ಆಂಧ್ರ ಪ್ರದೇಶದಿಂದ ನಾಡಹಬ್ಬ ಮೈಸೂರು ದಸರಾ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿಕೊಡುವ ಬಗ್ಗೆ ಕೇವಲ ಪ್ರಸ್ತಾಪ ಬಂದಿದೆ ಅಷ್ಟೇ. ಆದರೆ ನಾವು ಯಾವುದೇ ಕಾರಣಕ್ಕೂ ಅವುಗಳನ್ನು ಆಂಧ್ರಕ್ಕೆ ಕಳುಹಿಸಿಕೊಡುವುದಿಲ್ಲ. ಮೈಸೂರು ದಸರಾ ಆನೆಗಳು ನಮ್ಮ ಅಸ್ಮಿತೆಯಾಗಿದೆ. ಅವುಗಳಿಗೆ ಬದಲಾಗಿ ಬೇರೆ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಚರ್ಚಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಶನಿವಾರ (ಜೂನ್.15) ಭೇಟಿ ನೀಡಿದ ಅರಣ್ಯ ಸಚಿವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದರು.
ವಿದ್ಯುತ್ ಸ್ಪರ್ಶದಿಂದ ದಸರಾ ಆನೆ ಅಶ್ವತ್ಥಾಮ ಮರಣ ಹೊಂದಿದ ವಿಚಾರವಾಗಿ ವಿದ್ಯುತ್‌ನಿಂದ ಆನೆಗಳು ಸಾಯುತ್ತಿರುವುದು ವಿಷಾಧನೀಯ. ಈವರೆಗೆ ಇದರಿಂದ ಮಡಿದ ಆನೆಗಳ ವರದಿ ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಲಾಗವುದು ಎಂದು ವಿಷಾದ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಸಂಬಂಧಸಿದಂತೆ ಈ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಪರಿಸರ ಸಂರಕ್ಷಣೆ ಜತೆಗೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಇನ್ನು ದರ್ಶನ್ ರಾಯಭಾರಿಯಾಗಿದ್ದ ವಿಚಾರಕ್ಕೆ, ನಮ್ಮ ಇಲಾಖೆಗೆ ಯಾರೂ ರಾಯಭಾರಿಗಳಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.





