ಮೈಸೂರು: ಮೈಸೂರು ತಾಲ್ಲೂಕಿನ ಜೆಟ್ಟಿಹುಂಡಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಕಾಡಾನೆಗಳು ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಬೆಳ್ಳಂಬೆಳಿಗ್ಗೆಯೇ ಆನೆಗಳ ಅಟ್ಟಹಾಸವನ್ನು ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟಿದ್ದ ಎರಡು ಕಾಡಾನೆಗಳು ರೈತರು ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಶುಂಠಿ, ಬಾಳೆ, ತೆಂಗು ಸೇರಿದಂತೆ ಹಲವು ಬೆಳೆಗಳನ್ನು ತುಳಿದು ನಾಶ ಮಾಡಿವೆ.
ಇದರ ಜೊತೆಗೆ ಜಮೀನಿನಲ್ಲಿದ್ದ ಕೃಷಿ ಪರಿಕರಗಳನ್ನು ಸಹ ನಾಶ ಮಾಡಿದ್ದು, ರೈತರು ಕಂಗಾಲಾಗುವಂತೆ ಮಾಡಿವೆ.
ಆನೆಗಳ ದಾಳಿಯಿಂದ ತೀವ್ರ ಭಯಭೀತರಾಗಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳೆ ನಾಶಕ್ಕೆ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ಈ ಕಾಡಾನೆಗಳು ನಾಡಿನಲ್ಲಿ ಭಾರೀ ಪ್ರಮಾಣದ ನಷ್ಟ ಉಂಟುಮಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿವೆ.
ಈ ಹಿನ್ನೆಲೆಯಲ್ಲಿ ಇನ್ನಾದರೂ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.