ಮೈಸೂರು : ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೈಕೋರ್ಟ್ ನ ವಿಭಾಗೀಯ ಪೀಠ ವಜಾ ಮಾಡಿದೆ.
ಈ ಮೂಲಕ ಶಿಥಿಲಾವಸ್ಥೆಯಲ್ಲಿರುವ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಿ, ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡಬೇಕೆಂಬ ರಾಜ್ಯ ಸರಕಾರದ ನಿಲುವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠ ವಾದ ಪ್ರತಿವಾದ ಆಲಿಸಿ ಪಾರಂಪರಿಕ ಪ್ರಿಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿದೆ.
3.67 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ದೇವರಾಜ ಮಾರುಕಟ್ಟೆ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪಿತ್ತು. 2016ರಲ್ಲಿ ದೇವರಾಜ ಮಾರುಕಟ್ಟೆಯ ಉತ್ತರ ದ್ವಾರ ಕುಸಿದಿದೆ. ಬಳಿಕ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸಬಹುದೆ ಇಲ್ಲವೆ ಎಂದು ವರದಿ ನೀಡುವಂತೆ ಮೈಸೂರಿನ ಎಂಜಿನಿಯರ್ ಡಾ.ಸೈಯಿದ್ ಶಕೀಬ್ ಉರ್ ರೆಹಮಾನ್ ನೇತೃತ್ವದಲ್ಲಿ ಸರಕಾರ ತಜ್ಞರ ಸಮಿತಿ ರಚಿಸಿತ್ತು.ಮಾರುಕಟ್ಟೆಯನ್ನು ನವೀಕರಣಗೊಳಿಸಲು ಸಾಧ್ಯವಿಲ್ಲ. ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವುದು ಬಿಟ್ಟು ಬೇರೆ ಮಾರ್ಗವಿಲ್ಲ, ಎಂದು ಈ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಅದರಂತೆ ಸರಕಾರ ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಿತ್ತು.
ಮೈಸೂರಿನ ಪಾರಂಪರಿಕ ಪ್ರಿಯ ನಾಗರಿಕರಾದ ರಾಜಚಂದ್ರ, ಪ್ರೊ.ಸಿ.ಜಯದೇವರಾಜೇ ಅರಸ್, ಗೌರಿ ಸತ್ಯ, ಯಶಸ್ವಿನಿ ಶರ್ಮ ಹಾಗೂ ನಿರಂಜನ್ ನಿಕ್ಕಂ ಸೇರಿ ದೇವರಾಜ ಮಾರುಕಟ್ಟೆ ನೆಲಸಮ ಮಾಡದಂತೆ ಹೈಕೋರ್ಟ್ 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.
ರಾಜರ ಕಾಲದಲ್ಲಿ ವೈಜ್ಞಾನಿಕವಾಗಿ ಹೇಗೆ ಈ ಕಟ್ಟಡ ನಿರ್ಮಾಣ ಮಾಡಲಾಗಿದೆಯೊ ಅದೇ ರೀತಿ ವೈಜ್ಞಾನಿಕವಾಗಿ ನವೀಕರಣ ಮಾಡಬಹುದು. ಈ ಕಾರಣದಿಂದ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಬಾರದು, ಎಂದು ವಾದಿಸಿದ್ದರು.
ಹೀಗಾಗಿ ಸರಕಾರದ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತು. ನಂತರ ನಡೆದ ವಿಚಾರಣೆಯಲ್ಲಿ ಮಾರುಕಟ್ಟೆ ನೆಲಸಮ ಮಾಡದೆ ಬೇರೆ ಮಾರ್ಗವಿಲ್ಲ ಎಂದು ಸರಕಾರ ಹೈಕೋರ್ಟ್ ನಲ್ಲಿ ತಿಳಿಸಿತ್ತು. ಜತೆಗೆ ಡಾ.ಸೈಯಿದ್ ಶಕೀಬ್ ಉರ್ ರೆಹಮಾನ್ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿತು.
ಪಾಲಿಕೆ ಪರವಾಗಿ ವಾದ ಮಂಡಿಸಿದ ವಕೀಲೆ ಗೀತಾ, ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ದೇವರಾಜ ಮಾರುಕಟ್ಟೆಯನ್ನು ವೈಜ್ಞಾನಿಕ ರೀತಿಯಲ್ಲಿ ನವೀಕರಣ ಮಾಡಲು ಈಗ ತಜ್ಞ ಕೆಲಸಗಾರರು ಇಲ್ಲ. ಈ ಕಾರಣದಿಂದ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಬಿಟ್ಟು ಬೇರೆ ಮಾರ್ಗವಿಲ್ಲಎಂದು ಹೈಕೋರ್ಟ್ ಗೆ ಸರ್ಕಾರದ ಪರವಾಗಿ ಅಫಿಡವಿಟ್ ಸಲ್ಲಿಸಿ ವಾದ ಮಂಡಿಸಿದ್ದರು. ಇದೇ ವೇಳೆ ಪಾರಂಪರಿಕ ಪ್ರಿಯರು ಕೂಡ ಹೈಕೋರ್ಟ್ ಗೆ ಖಾಸಗಿ ತಜ್ಞರ ವರದಿ ಸಲ್ಲಿಸಿದ್ದರು.
ಮೈಸೂರಿನ ಕುಕ್ಕರಹಳ್ಳಿಕೆರೆ ಬಳಿ ಇರುವ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಸೆಂಟರ್ ಫಾರ್ ಫಿಲಾಸಫಿ ಪಾರಂಪರಿಕ ಕಟ್ಟಡ ಕೂಡ ಶಿಥಿಲಾವಸ್ಥೆಯಲ್ಲಿತ್ತು. ಮೈಸೂರು ವಿಶ್ವ ವಿದ್ಯಾಲಯ ಆ ಕಟ್ಟಡ ನವೀಕರಿಸಿ ಸಂರಕ್ಷಿಸಿದೆ. ಅದೇ ರೀತಿ ದೇವರಾಜ ಮಾರುಕಟ್ಟೆಯನ್ನು ನವೀಕರಿಸಬಹುದು. ಆ ಮೂಲಕ ಮೈಸೂರಿನ ಪಾರಂಪರಿಕತೆ ಸಂರಕ್ಷಿಸಬೇಕು ಎಂದು ಬೆಂಗಳೂರಿನ ಬಿಎಂಎಸ್ ಕಾಲೇಜಿನ ತಜ್ಞ ಎಂಜಿನಿಯರ್‌ಗಳು ನೀಡಿದ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು.
ಈ ವರದಿ ಆಧರಿಸಿ,ಹಲವು ಅಂಶಗಳ ದಾಖಲೆ ಮುಂದಿಟ್ಟು ಪಾರಂಪರಿಕ ಪ್ರಿಯರ ವಕೀಲರಾದ ಡಾ.ಆದಿತ್ಯ ಸೊಂದಿ ಹಾಗೂ ನಿಧಿ ಶ್ರೀ ವೇಣುಗೋಪಾಲ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಸರಕಾರದ ವಾದ ಹಾಗೂ ಪಾರಂಪರಿಕ ಪ್ರಿಯರ ಪ್ರತಿವಾದ ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠ, ದೇವರಾಜ ಮಾರುಕಟ್ಟೆ ನೆಲಸಮ ಮಾಡದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದೆಯನ್ನು ಮಂಗಳವಾರ ವಜಾ ಮಾಡಿದೆ.
ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸಿ ಪಾರಂಪರಿಕತೆ ಉಳಿಸುವ ನಮ್ಮ ನಿಲುವಿಗೆ ವಿರುದ್ಧವಾಗಿ ಹೈಕೋರ್ಟ್ ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪಿಐಎಲ್ ಅರ್ಜಿ ಸಲ್ಲಿಸಿದ ರಾಜಚಂದ್ರ ಹೇಳಿದ್ದಾರೆ.