ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಧನುಷ್ಕೋಟಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ದಂಡೇ ಹರಿದುಬರುತ್ತಿದೆ.
ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿ ತೊರೆಗಳೆಲ್ಲಾ ತುಂಬಿ ತುಳುಕುತ್ತಿವೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಲಿಗ್ರಾಮ ತಾಲ್ಲೂಕಿನ ಧನುಷ್ಕೋಟಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಜಲಪಾತದಲ್ಲಿ ನೀರಿನ ಹರಿವು ಹೆಚ್ಚಳವಾಗಿರುವ ಪರಿಣಾಮ ಮನಮೋಹಕವಾಗಿರುವ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 27 ಮೀಟರ್ ಎತ್ತರದಿಂದ ನೀರು ಜಿಗಿಯುತ್ತಿದ್ದು, ಪ್ರವಾಸಿಗರು ಸೆಲ್ಫಿ ತೆಗೆದುಕೊಂಡು ಜಲಾಶಯದ ಸೊಬಗನ್ನು ಸವಿಯುತ್ತಿದ್ದಾರೆ.
ಮಳೆ ಹೀಗೆಯೇ ಮುಂದುವರಿದರೆ ವೀಕೆಂಡ್‌ನಲ್ಲಿ ಈ ಜಲಪಾತಕ್ಕೆ ಇನ್ನೂ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆಯಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.





